ADVERTISEMENT

ಧರಣಿನಿರತರ ಮನವೊಲಿಸಿದ ಪೊಲೀಸರು

ಟಿಪ್ಪರ್‌ ಸಂಚಾರ ನಿರ್ಬಂಧಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 8:58 IST
Last Updated 5 ಅಕ್ಟೋಬರ್ 2017, 8:58 IST

ಟೇಕಲ್: ಟಿಪ್ಪರ್‌ಗಳ ಸಂಚಾರ ನಿರ್ಬಂಧಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಕೊಂಡಶೆಟ್ಟಹಳ್ಳಿ ಗ್ರಾಮಸ್ಥರೊಂದಿಗೆ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬುಧವಾರ ಮಾತುಕತೆ ನಡೆಸಿ ಧರಣಿ ನಿಲ್ಲಿಸುವಂತೆ ಮನವೊಲಿಸಿದರು.

ಟೇಕಲ್‌ ಸಮೀಪ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಪ್ರತಿನಿತ್ಯ ಟಿಪ್ಪರ್‌ಗಳಲ್ಲಿ ನೂರಾರು ಲೋಡ್‌ ಕಲ್ಲು ಸಾಗಿಸಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮದಲ್ಲಿ ಮಂಗಳವಾರ (ಅ.3) ರಸ್ತೆ ತಡೆ ಮಾಡಿ ಧರಣಿ ಮುಂದುವರಿಸಿದ್ದರು.

‘ಟಿಪ್ಪರ್‌ಗಳಿಗೆ ನಿಗದಿತ ಮಿತಿಯನ್ನು ಮೀರಿ ಕಲ್ಲು ತುಂಬಿಸಲಾಗುತ್ತಿದೆ. ಹೀಗಾಗಿ ರಸ್ತೆಗಳು ಹಾಳಾಗಿ ಇತರೆ ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದೆ. ಗ್ರಾಮದ ಸುತ್ತಮುತ್ತಲಿನ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಪದೇ ಪದೇ ಡಾಂಬರು ಹಾಕಿದರೂ ಟಿಪ್ಪರ್‌ಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ’ ಎಂದು ಗ್ರಾಮಸ್ಥರು ದೂರಿದರು.

ADVERTISEMENT

‘ಟಿಪ್ಪರ್‌ಗಳು ಅತಿ ವೇಗದಲ್ಲಿ ಸಂಚರಿಸುತ್ತಿದ್ದು, ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚೆಗೆ ಟಿಪ್ಪರ್‌ ಬೈಕ್‌ಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ಸಾಕಷ್ಟು ಸಮಸ್ಯೆಯಾಗಿದೆ. ಕೆಲ ರಸ್ತೆಗಳು ಮಳೆಗೆ ರಾಡಿಯಾಗಿವೆ. ಜಿಲ್ಲಾಡಳಿತವು ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಪೊಲೀಸರು ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡುವುದಾಗಿ ಹೇಳಿದರು. ಬಳಿಕ ಗ್ರಾಮಸ್ಥರು ಧರಣಿ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.