ADVERTISEMENT

ನಮ್ಮ ಹಕ್ಕನ್ನು ಇನ್ನು ಕೇಳಿ ಪಡೆವೆವು...

ಉದ್ಯೋಗಖಾತ್ರಿ ಜಾಬ್‌ಕಾರ್ಡ್ ಉಳ್ಳ ಮಹಿಳೆಯರ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 31 ಜನವರಿ 2013, 5:52 IST
Last Updated 31 ಜನವರಿ 2013, 5:52 IST
ಕೋಲಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಉದ್ಯೋಗ ಖಾತ್ರಿ ಯೋಜನೆ ಕುರಿತು ಸಂಪನ್ಮೂಲ ವ್ಯಕ್ತಿ ಕೆ.ಎಸ್.ನಾಗವೇಣಿ ವಿವರಿಸುತ್ತಿರುವುದು. ತರಬೇತಿಯ ಉಸ್ತುವಾರಿ ಹೊತ್ತಿರುವ ಜಯರಾಂ ಇದ್ದಾರೆ.
ಕೋಲಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಉದ್ಯೋಗ ಖಾತ್ರಿ ಯೋಜನೆ ಕುರಿತು ಸಂಪನ್ಮೂಲ ವ್ಯಕ್ತಿ ಕೆ.ಎಸ್.ನಾಗವೇಣಿ ವಿವರಿಸುತ್ತಿರುವುದು. ತರಬೇತಿಯ ಉಸ್ತುವಾರಿ ಹೊತ್ತಿರುವ ಜಯರಾಂ ಇದ್ದಾರೆ.   

ಕೋಲಾರ: ಮೊದಲು ಏನೂ ಗೊತ್ತಾಗುತ್ತಿರಲಿಲ್ಲ. ಎಲ್ಲವನ್ನೂ ಗ್ರಾಮ ಪಂಚಾಯಿತಿ ಮೂಲಕವೇ ತಿಳಿದುಕೊಳ್ಳಬೇಕಾಗಿತ್ತು. ಜಾಬ್ ಕಾರ್ಡ್ ಪಡೆಯಲೂ ಕಮಿಷನ್ ಕೊಡುತ್ತಿದ್ದೆವು. ಕೆಲಸ ಮಾಡಿಸುವವರಿಗೂ ಕಮಿಷನ್ ಕೊಡ್ತಿದ್ದೆವು. ಇನ್ನು ಕೊಡುವುದಿಲ್ಲ....

ಕೆಲಸ ಮಾಡುವ ಜಾಗಕ್ಕೆ ಕುಡಿಯುವ ನೀರನ್ನು ನಾವೇ ತಗೊಂಡು ಹೋಗ್ತಿದ್ದೆವು. ಕೆಲಸ ಮಾಡಿಸುವ ಅಧಿಕಾರಿಯೇ ಆ ವ್ಯವಸ್ಥೆ ಮಾಡಬೇಕು ಎಂದು ಗೊತ್ತೇ ಇರಲಿಲ್ಲ...

ಜಾಬ್ ಕಾರ್ಡನ್ನು ಬೇರೆಯವರಿಗೆ ಕೊಡಬಾರದು. ಕೊಡುವುದು ಮತ್ತು ಪಡೆಯುವುದು ಅಪರಾಧ ಎಂದು ಗೊತ್ತಾಗಿದೆ. ಇನ್ನು ನಮ್ಮ ಜಾಬ್ ಕಾರ್ಡನ್ನು ನಮ್ಮ ಬಳಿಯೇ ಇಟ್ಟುಕೊಳ್ಳುತ್ತೇವೆ. ನಮ್ಮ ಹಕ್ಕನ್ನು ಕೇಳಿ ಪಡೆಯುತ್ತೇವೆ....

- ತಾಲ್ಲೂಕಿನ ವಡಗೂರು ಗ್ರಾಮ ಪಂಚಾಯಿತಿ ಚೆದುಮನಹಳ್ಳಿಯ ಚಾಮುಂಡೇಶ್ವರಿ ಮಹಿಳಾ ಸ್ವಸಹಾಯ ಸಂಘದ ಮೀನಾಕ್ಷಮ್ಮ, ನಾರಾಯಣಮ್ಮ, ಭಾಗ್ಯಮ್ಮ, ತಿಮ್ಮಸಂದ್ರದ ವೇಣುಗೋಪಾಲಸ್ವಾಮಿ ಮಹಿಳಾ ಸ್ವಸಹಾಯ ಸಂಘದ ರಾಜಮ್ಮ  ಮತ್ತಿತರ ಮಹಿಳೆಯರ ಜಾಗೃತ ನುಡಿಗಳಿವು.

ಇದು ಕೇವಲ ಕೋಲಾರ ತಾಲ್ಲೂಕಿನ ಮಾತಲ್ಲ. ಇಡೀ ರಾಜ್ಯದಲ್ಲಿ ಇಂಥದೊಂದು ಜಾಗೃತಿ ಯಾತ್ರೆ ಶುರುವಾಗಿದೆ. ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಜಾಬ್‌ಕಾರ್ಡ್‌ದಾರರಿಗೆ ಅರಿವು ಮೂಡಿಸುವ ಪ್ರಯತ್ನದ ಫಲ ಇದು.

ಇದುವರೆಗೂ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಿಗೆ, ಅಧಿಕಾರಿಗಳಿಗೆ ತರಬೇತಿ ನೀಡಲಾಗಿತ್ತು. ಆದರೆ ಅದರಿಂದ ಯೋಜನೆಯ ಸಮರ್ಪಕ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರ ಜಾಬ್‌ಕಾರ್ಡ್‌ದಾರರಿಗೇ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದೆ.

ಯೋಜನೆ ಯಶಸ್ವಿ ಅನುಷ್ಠಾನದಲ್ಲಿ ಸ್ವಸಹಾಯ ಸಂಘದ ಸದಸ್ಯರ ಪಾತ್ರದ ಬಗ್ಗೆ ಈಗ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ, ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯ ಆಯ್ದ 30 ಕ್ರಿಯಾಶೀಲ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ ಸದ್ದಿಲ್ಲದೆ ನಡೆಯುತ್ತಿದೆ. ಡಿ.12ರಿಂದಲೇ ತರಬೇತಿ ಶುರುವಾಗಿದ್ದು, ಫೆ.5ರವರೆಗೆ ನಡೆಯಲಿದೆ.

ಈಗ ತರಬೇತಿ ಪಡೆಯುತ್ತಿರುವವರೆಲ್ಲರೂ ರೈತ ಮಹಿಳೆಯರು. ಜಾಬ್‌ಕಾರ್ಡ್ ಉಳ್ಳವರು. ಈ ತರಬೇತಿಯನ್ನು ಇನ್ನೂ ಮೊದಲೇ ನೀಡಿದ್ದರೆ ದಲ್ಲಾಳಿಗಳಿಂದ ಶೋಷಣೆಗೊಳಗಾಗುವುದು ತಪ್ಪುತ್ತಿತ್ತು ಎನ್ನುವುದು ಹಲವರ ಅಭಿಪ್ರಾಯ ಎನ್ನುತ್ತಾರೆ ತರಬೇತುದಾರರಾದ ಕೆ.ಎಸ್.ನಾಗವೇಣಿ.

ಈ ಮೊದಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡಲಾಗಿದೆ. ಆದರೆ ಅವರ ಪಾಲ್ಗೊಳ್ಳುವಿಕೆ ಆಶಾದಾಯಕವಾಗಿರಲಿಲ್ಲ. ಈಗ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಪೈಕಿ ಶೇ.90ರಷ್ಟು ಮಂದಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಮಂಗಳವಾರ `ಪ್ರಜಾವಾಣಿ'ಗೆ ತಿಳಿಸಿದರು.

ಅರಿವಿನ ಬೆಳಕು: ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಮಹಿಳೆಯರಲ್ಲಿ ಈಗ ಅರಿವಿನ ಬೆಳಕು ಮೂಡಿದೆ. ಪ್ರತಿ 40 ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಕಲ್ಪಿಸುವಲ್ಲಿ ಉದ್ಯೋಗ ಮಿತ್ರರನ್ನು ನೇಮಿಸಿಕೊಳ್ಳಲು ಯೋಜನೆಯಲ್ಲಿ ಅವಕಾಶವಿದೆ ಎಂದು ಗೊತ್ತೇ ಇರಲಿಲ್ಲ. ಜಾಬ್‌ಕಾರ್ಡ್, ಕೆಲಸಗಳಿಗಾಗಿ ಎಲ್ಲರೂ ಮನೆಕೆಲಸ ಬಿಟ್ಟು ಓಡಾಡುತ್ತಿದ್ದೆವು. ಈಗ ಹಾಗೆ ಮಾಡುವುದಿಲ್ಲ. ನಮ್ಮ ಸಂಘದಿಂದಲೇ ಒಬ್ಬ ಉದ್ಯೋಗಮಿತ್ರರನ್ನು ನೇಮಿಸಿಕೊಳ್ಳುತ್ತೇವೆ. ನಮ್ಮ ಕೆಲಸ ಸಲೀಸು ಮಾಡಿಕೊಳ್ಳುತ್ತೇವೆ ಎಂಬುದು ಗಂಗಮ್ಮ ಎಂಬ ಮಹಿಳೆಯ ನುಡಿ.

ಕೆಲಸ ಮಾಡಿಸಿದವರು ನಮಗೆ ಕೊಡಬೇಕಾದ ಕೂಲಿಯನ್ನು ಸರಿಯಾಗಿ ನೀಡದೆ ಮೋಸ ಮಾಡಿದರು. 40 ಸಾವಿರವನ್ನು ಕೊಡಲೇ ಇಲ್ಲ. ಹೀಗಾಗಿ ತಲಾ 70 ರೂಪಾಯಿಯಂತೆ ಹಣ ಹಂಚಿಕೊಂಡೆವು. ಇನ್ನು ಹೀಗಾಗಲು ಬಿಡುವುದಿಲ್ಲ ಎಂದು ರಾಜಮ್ಮ ನಿರ್ಧಾರಾತ್ಮಕ ಧ್ವನಿಯಲ್ಲಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.