ಕೆಜಿಎಫ್: ಬರ ನಿರ್ವಹಣೆ ಮತ್ತು ಬಡವರಿಗೆ ನಿವೇಶನ ವಿತರಣೆ ಮಾಡುವಲ್ಲಿ ವಿಫಲವಾಗಿರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗದ ಕಾರ್ಯವೈಖರಿ ಬಗ್ಗೆ ಶಾಸಕ ವೈ.ಸಂಪಂಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೇತಮಂಗಲದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೆಜಿಎಫ್ ವಿಧಾನಸಭಾ ಕ್ಷೇತ್ರದ 168 ಗ್ರಾಮಗಳ ಪೈಕಿ 46 ಗ್ರಾಮಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.
ಆದರೆ ಕ್ಷೇತ್ರದ ಬಹುತೇಕ ಎಲ್ಲಾ ಗ್ರಾಮಗಳಲ್ಲಿಯೂ ನೀರಿನ ಕೊರತೆ ಎದ್ದು ಕಾಣುತ್ತಿದೆ. ಈ ಸಂಬಂಧವಾಗಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುತ್ತಿಲ್ಲ. ಬರ ನಿರ್ವಹಣೆಯಲ್ಲಿ ಹೆಚ್ಚು ಕಡಿಮೆಯಾದರೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯನ್ನೇ ಜವಾಬ್ದಾರಿಯನ್ನಾಗಿ ಮಾಡಲಾಗು ವುದು ಎಂದು ಹೇಳಿದರು.
ತಾಲ್ಲೂಕಿನ ಪಾರಾಂಡಹಳ್ಳಿ, ಪರಸೇಹಳ್ಳಿ, ನಾಯನಹಳ್ಳಿ, ಪಿಚ್ಚಗೊಂಡ್ಲಹಳ್ಳಿಗಳಲ್ಲಿ ಬಡವರಿಗೆ ನಿವೇಶನಗಳನ್ನು ವಿತರಣೆ ಮಾಡಲು ಸರ್ಕಾರ ಸಿದ್ಧವಿದ್ದರೂ, ಜಿ.ಪಂ. ತಾಂತ್ರಿಕ ವಿಭಾಗದ ಅಧಿಕಾರಿಗಳು ಕರ್ತವ್ಯಲೋಪವೆಸಗಿದ್ದಾರೆ. ಮೇ. 31 ರೊಳಗೆ ಸರ್ಕಾರ ವಿತರಣೆ ಮಾಡಲು ಉದ್ಧೇಶಿಸಿರುವ ನಿವೇಶನಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲು ಸಹಕಾರ ನೀಡದಿದ್ದಲ್ಲಿ ಬೇರೆ ಅಧಿಕಾರಿಗಳ ನಿಯೋಜನೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಬೇತಮಂಗಲದ ಜೋಡಿ ರಸ್ತೆ, ರಾಬರ್ಟಸನ್‌ಪೇಟೆಯ ಜೋಡಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಸದರಿ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಲೋಕೋಪಯೋಗಿ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಕ್ಷೇತ್ರದ ಚೆನ್ನಪಲ್ಲಿ, ನಾಗಶೆಟ್ಟಿಹಳ್ಳಿ, ಕೂಳೂರು, ಸರ್ವರೆಡ್ಡಿಪಲ್ಲಿ, ಕದರಿಪುರ, ತಲ್ಲಪಲ್ಲಿ, ಜೀಡಮಾಕನ ಹಳ್ಳಿ, ವೆಂಕಟಾಪುರ, ಬೆಟ್ಕೂರು, ಗುಟ್ಟಹಳ್ಳಿ, ಕಂಬಂಪಲ್ಲಿ, ದೊಡ್ಡಕಂಬಳಿ, ಕ್ಯಾಸಂಬಳ್ಳಿ, ಬೇತಮಂಗಲ, ಬಾರ‌್ಲಿ, ರಾಮಾಪುರ, 3ನೇ ಮೈಲು, ನತ್ತ ಗ್ರಾಮಗಳಲ್ಲಿ ಸಂಪೂರ್ಣವಾಗಿ ಕುಡಿಯುವ ನೀರು ಬರಿದಾಗಿದ್ದು, ಟ್ಯಾಂಕರ್ ಮೂಲಕ ನೀರನ್ನು ಸರಬ ರಾಜು ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಬಡವರಿಗೆ ಮನೆಗಳನ್ನು ವಿತರಣೆ ಮಾಡಲು ಸರ್ಕಾರಿ ಜಮೀನನ್ನು ಗುರುತಿಸಿ ಒಂದು ವಾರದಲ್ಲಿ ಸರ್ವೆ ಮಾಡಿಸಿಕೊಡಲಾಗುವುದು. ಸರ್ವೆ ಮಾಡಿದ ತಕ್ಷಣ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಗುರುತಿನ ಕಲ್ಲು ಹಾಕಿಕೊಳ್ಳಬೇಕು ಎಂದು ತಹ ಶೀಲ್ದಾರ್ ಮಂಗಳಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.