ADVERTISEMENT

ನೀರು ಸಮಸ್ಯೆ: 10 ಲಕ್ಷ ಮಂಜೂರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 3:25 IST
Last Updated 21 ಮಾರ್ಚ್ 2012, 3:25 IST

ಮಾಲೂರು: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಪುರಸಭಾ ಉಪಾಧ್ಯಕ್ಷ ಎ.ರಾಜಪ್ಪ ತಿಳಿಸಿದರು.
 
ಮಂಗಳವಾರ ಪುರಸಭಾ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪ್ರತಿದಿನ 54 ಲಕ್ಷ ಲೀಟರ್ ನೀರಿನ ಬೇಡಿಕೆ ಇದ್ದು, ಕೊಳವೆ ಬಾವಿಗಳಿಂದ 24 ಲಕ್ಷ ಲೀ. ನೀರು ಮಾತ್ರ ಶೇಖರಣೆಯಾಗುತ್ತಿದೆ. 30 ಲಕ್ಷ ಲೀ. ನೀರು ಕೊರತೆ ಇರುವುದರಿಂದ ಸಮಸ್ಯೆ ಎದುರಾಗಿದೆ.

ಟ್ಯಾಂಕರ್ ಮೂಲಕ ತುರ್ತಾಗಿ ನೀರು ಪೂರೈಸಲು ಬರ ಪರಿಹಾರ ನಿಧಿಯಿಂದ ಮಂಜೂರಾಗಿರುವ 10 ಲಕ್ಷ ರೂ. ಗಳನ್ನು ಬಳಕೆ ಮಾಡಿಕೊಳ್ಳಲು ಜಿಲ್ಲಾಧಿ ಕಾರಿ ಸೂಚಿಸಿದ್ದಾರೆ. ನೀರಿನ ಸಮಸ್ಯೆ ಎದುರಿಸುತ್ತಿರುವ ವಾರ್ಡ್ ಗಳಿಗೆ ಪ್ರತಿದಿನ 5 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತದೆ  ಎಂದು ಹೇಳಿದರು.
ಪಟ್ಟಣದಲ್ಲಿ 160 ಪುರಸಭೆಯ ಕೊಳವೆ ಬಾವಿಗಳಿದ್ದು, 75 ಬಾವಿಗಳಲ್ಲಿ ಮಾತ್ರ ನೀರು ಸರಬರಾಜು ಆಗುತ್ತಿದೆ. ಉಳಿದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಖಾಸಗಿ ಬೋರ್‌ವೆಲ್‌ಗಳ ಮಾಲೀಕರ ಸಭೆಯನ್ನು ಬುಧವಾರ ಕರೆದಿದ್ದು, ಮಳೆಗಾಲದವರೆಗೆ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಮನವೊಲಿಸುವುದಾಗಿ  ಹೇಳಿದರು.
ಪುರಸಭಾ ಅಧ್ಯಕ್ಷೆ ಗುಲಾಬ್‌ಜಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ, ಎಂಜಿನಿಯರ್‌ಗಳಾದ ನರಸಿಂಹಸ್ವಾಮಿ, ವಿಶ್ವನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.