ADVERTISEMENT

ಪಪ್ಪಾಯಿಗೆ ವೈರಾಣು ರೋಗ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 9:40 IST
Last Updated 13 ಜನವರಿ 2012, 9:40 IST

ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಳೆಯಲಾಗಿರುವ ಪಪ್ಪಾಯಿ ಬೆಳೆ ವೈರಾಣು ರೋಗ ಪೀಡಿತವಾಗಿದ್ದು ಬೆಳೆಗಾರರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಇದರಿಂದ ಬೆಳೆಗೆ ಅಧಿಕ ಬಂಡವಾಳ ಹಾಕಿದ್ದ ರೈತರು ಕಂಗಾಲಾಗಿದ್ದಾರೆ.

ಆರಂಭದಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ಪಪ್ಪಾಯಿ ಬೆಳೆದು ಒಳ್ಳೆ ಹಣ ಮಾಡಿದರು. ಅವರಿಂದ ಪ್ರೇರಿತರಾದ ಹೆಚ್ಚಿನ ಸಂಖ್ಯೆಯ ರೈತರು ಈಗ ಪಪ್ಪಾಯಿ ಬೆಳೆದಿದ್ದಾರೆ. ಆದರೆ ಬೆಳೆಗೆ ವ್ಯಾಪಕವಾಗಿ ತಟ್ಟಿರುವ ವೈರಾಣು ರೋಗ ಗಿಡಗಳ ಬೆಳವಣಿಗೆ ಕುಂಠಿತಗೊಳಿಸಿದೆ.

ಗಿಡದ ಎಲೆ ಹಳದಿ ಬಣ್ಣಕ್ಕೆ ತಿರುಗಿ, ಕ್ರಮೇಣ ಒಣಗಿ ಉದುರುತ್ತಿದೆ. ಬೆಳೆದಿರುವ ಮರಗಳಲ್ಲಿ ಬಂಜೆತನ ಕಾಣಿಸಿಕೊಂಡಿದೆ. ಕಾಯಿಯ ಬೆಳವಣಿಗೆ ಸಮರ್ಪಕವಾಗಿ ಆಗುತ್ತಿಲ್ಲ. ಕೆಲವು ಕಡೆ ಸಸಿ ಹಂತದಲ್ಲಿಯೇ ರೋಗ ಕಾಣಿಸಿಕೊಂಡಿದೆ.

ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಬೆಲೆ ಏರುಪೇರು ಸಾಮಾನ್ಯವಾಗಿದೆ. ಅದರ ಜೊತೆಗೆ ಈ ಹಾಳು ರೋಗ ತೋಟವನ್ನು ಹಾಳು ಮಾಡುತ್ತಿದೆ. ಎಷ್ಟೇ ಔಷಧಿ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಎಲೆಗಳು ಉದುರಿ ಮರಗಳು ಬೋಳಾಗುತ್ತಿವೆ. ಇರುವ ಕಾಯಿಗಳ ಮೇಲೆ ಬಿಳಿ ಮತ್ತು ಕಪ್ಪು ಮಚ್ಚೆ ಕಾಣಿಸಿಕೊಂಡಿವೆ. ಸಿಹಿಯೂ ಕಡಿಮೆಯಾಗಿದೆ. ಇದರಿಂದ ಭಾರಿ ನಷ್ಟ ಉಂಟಾಗಿದೆ ಎಂಬುದು ಬೆಳೆಗಾರರ ಅಳಲು.

ಬೆಳೆಗಾರರಿಗೆ ಸಲಹೆ
ಪಪ್ಪಾಯಿಗೆ ವೈರಾಣು ರೋಗ ಬಂದ ನಂತರ ನಿಯಂತ್ರಣ ಕಷ್ಟ. ರೋಗ ಬರದಂತೆ ಮುಂಜಾಗ್ರತೆ ವಹಿಸುವುದೊಂದೇ ಪರಿಹಾರ ಎಂದು ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಬಿ.ಎಂ.ಮಲ್ಲಿಕಾರ್ಜುನ ಬಾಬು ಸಲಹೆ ನೀಡಿದ್ದಾರೆ.

ಪಪ್ಪಾಯಿ ತೋಟದ ಪಕ್ಕದಲ್ಲಿ ಟೊಮೆಟೊ ಬೆಳೆಯಬಾರದು. ಟೊಮೆಟೊಗೆ ಬರುವ ವೈರಾಣು ರೋಗ ಪಪ್ಪಾಯಿ ಬೆಳೆಗೆ ಸುಲಭವಾಗಿ ಹರಡುತ್ತದೆ. ರೋಗ ಪೀಡಿತ ಪಪ್ಪಾಯಿ ಗಿಡಗಳನ್ನು ಗುರುತಿಸಿ ಆರಂಭಿಕ ಹಂತದಲ್ಲಿಯೇ ಕಿತ್ತು ಸುಡಬೇಕು. ಗಿಡಗಳಿಗೆ ಬೇವಿನ ಹಿಂಡಿ ಮತ್ತು ಸಾವಯವ ಗೊಬ್ಬರವನ್ನು ಹೆಚ್ಚಾಗಿ ಕೊಡಬೇಕು. ಅದರಿಂದ ರೋಗ ಹಾಗೂ ಕೀಟಗಳ ಹಾವಳಿ ಕಡಿಮೆಯಾಗುತ್ತದೆ. ತೋಟದ ಸುತ್ತಲೂ ಒಂದು ಸಾಲು ಮುಸುಕಿನ ಜೋಳ ಬೆಳೆಯಬೇಕು. ಅದು ಬಿಳಿ ನೊಣದ ಹಾವಳಿ ತಡೆಯುತ್ತದೆ ಎಂದು ಸಲಹೆ ನೀಡಿದ್ದಾರೆ.

ರೈತರು ಪಪ್ಪಾಯಿ ಬೆಳೆದ ತೋಟದಲ್ಲಿ ಮತ್ತೆ ಅದೇ ಬೆಳೆ ಬೆಳೆಯದೆ ಬೆಳೆ ಬದಲಾಯಿಸಬೇಕು. ಕುಂಬಳ, ಸೋಯಾ, ರಾಗಿ, ಕ್ಯಾರೆಟ್, ಮೂಲಂಗಿ ಮುಂತಾದ ಬೆಳೆ ಬೆಳೆಯಬೇಕು. ಇಲ್ಲವಾದರೆ ಪಪ್ಪಾಯಿ ಸಸಿ ಹಂತದಲ್ಲಿಯೇ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.