ADVERTISEMENT

ಪರಿಶಿಷ್ಟ ಅನುದಾನ ಬಳಕೆಗೆ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 9:40 IST
Last Updated 15 ಸೆಪ್ಟೆಂಬರ್ 2011, 9:40 IST

ಕೋಲಾರ: ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿರಿಸಿದ ಶೇ 22.75ರಷ್ಟು ಅನುದಾನ ಬಳಸುವಲ್ಲಿ ನಿರ್ಲಕ್ಷ್ಯ ತೋರುವ ಸ್ಥಳೀಯ ಸಂಸ್ಥೆ ಗಳಿಗೆ ಶೀಘ್ರ ಸಮಾಜ ಕಲ್ಯಾಣ ಇಲಾಖೆಯು ಪಾಠ ಹೇಳಲಿದೆ.

ಅನುದಾನವನ್ನು ಬಳಸದಿರುವುದು, ಅರ್ಹ ಫಲಾನುಭವಿಗಳಿಗೆ ನೀಡದಿರು ವುದು, ಅನರ್ಹರನ್ನು ಆಯ್ಕೆ ಮಾಡು ವುದೂ ಸೇರಿದಂತೆ ಅನುದಾನ ಬಳಕೆಯ ಲೋಪಗಳನ್ನು ಪತ್ತೆ ಹಚ್ಚಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮುಂದಾಗಿದೆ.

ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ ಸೂಚನೆ ಮೇರೆಗೆ ನಿರ್ದೇಶನಾಲಯವು ಈಗಾಗಲೇ ಕಾರ್ಯಚರಣೆಯನ್ನು ಆರಂಭಿಸಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಗಳಿಗೆ ನಿರ್ದೇಶನಾಲಯದ ಜಿಲ್ಲಾ ಮಟ್ಟದ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾರಂಭಿಸಿದ್ದಾರೆ.

ಸ್ಥಳೀಯ ಆಡಳಿತ ಸಂಸ್ಥೆಗಳೂ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ನೀಡಲಾಗುತ್ತಿರುವ ಸೌಕರ್ಯಗಳನ್ನೂ ನಿರ್ದೇಶನಾಲಯ ಪರಿಶೀಲಿಸುತ್ತಿದೆ. ಪರಿಶೀಲನೆ ಬಳಿಕ, ಈ ಅನುದಾನ ಬಳಕೆ ಮೇಲ್ವಿಚಾರಣೆಗೆ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗೆ ನಿರ್ದೇಶನಾಲ ಯವು ವರದಿ ನೀಡಲಿದ್ದು, ಅದನ್ನು ಆಧರಿಸಿ ಇಲಾಖೆಯು ಕ್ರಮಕೈ ಗೊಳ್ಳಲಿದೆ.

`ಅನುದಾನದ ಅಡಿ ತಯಾರಿಸಿದ ಕ್ರಿಯಾ ಯೋಜನೆ, ಫಲಾನುಭವಿಗಳ ಆಯ್ಕೆ, ಸೌಲಭ್ಯ ವಿತರಣೆಯ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಮೊದಲು ಮಾಹಿತಿಗಳನ್ನು ಸಂಗ್ರಹಿಸುವರು, ನಂತರ ಪರಿಶೀಲಿಸಿ ಕ್ರಮಕ್ಕೆ ಶಿಫಾರಸು ಮಾಡುವರು~ ಎಂದು ನಿರ್ದೇಶನಾಲಯ ಬೆಂಗಳೂರು ಪ್ರಾದೇಶಿಕ ಎಸ್‌ಪಿ ರೇಣುಕಾ ಕೆ. ಸುಕುಮಾರ್ ತಿಳಿಸಿದ್ದಾರೆ.

ಪರಿಶಿಷ್ಟರ ಅನುದಾನ ಬಳಕೆ ಕುರಿತು ನಗರಸಭೆಯಿಂದ ಮಾಹಿತಿ ಪಡೆಯುವ ಸಲುವಾಗಿ ಬುಧವಾರ ನಗರಕ್ಕೆ ಬಂದಿದ್ದ ಅವರು `ಪ್ರಜಾವಾಣಿ~ಯೊಡನೆ ಮಾತನಾಡಿ, `ಎಲ್ಲ ಜಿಲ್ಲೆಗಳಲ್ಲೂ ಈ ಕಾರ್ಯಾಚರಣೆ ಶುರುವಾಗಿದೆ. ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೆಜಿಎಫ್, ಚಿಕ್ಕಬಳ್ಳಾಪುರ ಮತ್ತು ತುಮಕೂರು ವ್ಯಾಪ್ತಿಯಲ್ಲಿ ಹಲವು ಕಚೇರಿಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದರು.

`ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಅನುದಾನ ಬಳಕೆಯ ಬಗ್ಗೆಯೂ ಗಂಭೀರ ಪರಿಶೀಲನೆ ನಡೆಸಲಾಗು ವುದು. ಪ್ರತಿ ಗ್ರಾಮ ಪಂಚಾಯಿತಿ ಯನ್ನೂ ವಿಶೇಷವಾಗಿ ಪರಿಗಣಿಸಲಾಗು ವುದು. ಎಲ್ಲಿಯೂ ಪರಿಶಿಷ್ಟರ ಅನುದಾನ ಅರ್ಹರಲ್ಲದೆ ಬೇರೊಬ್ಬರಿಗೆ ತಲುಪುವುದನ್ನು ತಡೆಯುವುದೇ ಕಾರ್ಯಾಚರಣೆಯ ಉದ್ದೇಶ~ ಎಂದರು.

`ಕಾರ್ಯಾಚರಣೆಗೆ ತಾಲ್ಲೂಕುವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಆಡಳಿತ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿ ವರದಿ ನೀಡುತ್ತಾರೆ. ಅದನ್ನು ಸೂಕ್ತ ಕ್ರಮದ ಶಿಫಾರಸಿನ ಜೊತೆಗೆ ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗುವುದು. ಅನುದಾನ ಸದ್ಬಳಕೆಯನ್ನೆ ಆಶಯ ವನ್ನಾಗಿರಿಸಿಕೊಂಡಿರುವ ಇಲಾಖೆಯು ಕ್ರಮವನ್ನು ಕೈಗೊಳ್ಳಲಿದೆ~ ಎಂದು ತಿಳಿಸಿದರು.

ದೂರಿಲ್ಲ: ನಿರ್ದೇಶನಾಲಯವು ಯಾವುದೇ ದೂರನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸುವುದಿಲ್ಲ. ಬದಲಿಗೆ ನಿರ್ದೇಶನಲಾಯದ ಪ್ರಮುಖ ಜವಾಬ್ದಾರಿ ಎಂದು ಪರಿಗಣಿಸಿ ಸ್ವಯಂ ಪ್ರೇರಣೆಯಿಂದ ತೊಡಗಿದೆ. ಸಾರ್ವಜನಿಕರ ದೂರುಗಳನ್ನು ಆಧರಿಸಿ ಹಲವು ಕ್ರಮಗಳನ್ನು ಕೈಗೊಳ್ಳುವ ಕೆಲಸವೂ ನಡೆಯುತ್ತಿದೆ~ ಎಂದರು.

ಗೊತ್ತಿಲ್ಲ: ಸ್ಥಳೀಯ ಸಂಸ್ಥೆಗಳ ಬಹಳಷ್ಟು ಅಧಿಕಾರಿಗಳಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವೊಂದು ಇದೆ ಎಂಬ ಸಂಗತಿಯೇ ಗೊತ್ತಿಲ್ಲ. ಈ ಕಾರ್ಯಾಚರಣೆಯ ಪರಿಣಾಮವಾಗಿ ಅವರಲ್ಲಿ ನಿರ್ದೇಶನಾಲಯದ ಕುರಿತು ಜಾಗೃತಿ ಮೂಡುತ್ತಿರುವುದೂ ವಿಶೇಷ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.