ADVERTISEMENT

ಪ್ರತಿ ಹೆಜ್ಜೆಗೊಂದು ಸಮಸ್ಯೆ ಅನಾವರಣ

ಮುಖ್ಯಮಂತ್ರಿಗೆ ಹಲವು ಅಹವಾಲು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:08 IST
Last Updated 26 ಸೆಪ್ಟೆಂಬರ್ 2013, 6:08 IST

ಕೋಲಾರ: ದಲಿತರ ಸಮಸ್ಯೆಗಳನ್ನು ಪರಿಹರಿಸಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಿರಿ, ಕಲಾವಿದರಿಗೆ ಮಾಸಾಶನ ಸೇರಿದಂತೆ ಸೌಲಭ್ಯಗಳ ವಿಲೇವಾರಿಗೆ ಕ್ರಮ ಕೈಗೊಳ್ಳಿ, ಅಂಗವಿಕಲರನ್ನು ಜಿಲ್ಲೆಯಲ್ಲಿ ಕಡೆಗಣಿಸಲಾಗಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಗರಕ್ಕೆ ನೀರು ಪೂರೈಸಲು ಯೋಜನೆ ರೂಪಿಸಿ..ಕಾಲು ಬಾಯಿ ಜ್ವರದಿಂದ ಸತ್ತ ಹಸುಗಳ ಮಾಲೀಕರಿಗೆ ಪರಿಹಾರ ನೀಡಿ.

–ನಗರದ ಜಿಲ್ಲಾ ಪಂಚಾಯಿತಿ ಹೊರ ಆವರಣ­ದಲ್ಲಿ ಬುಧವಾರ ಸಂಜೆ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದ­ರಾಮಯ್ಯ­ನವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ ವಿವಿಧ ಕ್ಷೇತ್ರಗಳ ಮಂದಿ ಹಲವು ಸಮಸ್ಯೆಗಳ ಕಡೆಗೆ ಗಮನ ಸೆಳೆದರು. ಸಾರ್ವಜನಿಕರಷ್ಟೇ ಅಲ್ಲ, ನಗರಸಭೆ ಸದಸ್ಯರು, ಬಿಜೆಪಿ ಮುಖಂಡರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಕೂಡ ಜನರೊಂದಿಗೆ ಅಹವಾಲನ್ನು ಸಲ್ಲಿಸಿದರು.

ಸಮಾಜ ಕಲ್ಯಾಣ ಇಲಾಖೆ ಕಾಮಗಾರಿಗಳನ್ನು ನಡೆಸಲು ದಲಿತ ಗುತ್ತಿಗೆದಾರರಿಗೆ ಅವಕಾಶ ನೀಡುತ್ತಿಲ್ಲ. ಕಾನೂನು ಪದವೀಧರರಿಗೆ ನೀಡುವ 1 ಸಾವಿರ ಮಾಸಾಶನವನ್ನು 5 ಸಾವಿರಕ್ಕೆ ಏರಿಸ­ಬೇಕು. ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ ಮರುಪಾವತಿ ಮೂರು ವರ್ಷದಿಂದ ನಡೆದೇ ಇಲ್ಲ. ದಲಿತರ ಸ್ಮಶಾನ ಭೂಮಿಗೆ ಭದ್ರತೆ ಇಲ್ಲ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿ ನಡೆಯುತ್ತಿಲ್ಲ ಎಂದು ಮುಖಂಡ ಡಾ.ಎಂ.ಚಂದ್ರಶೇಖರ್‍ ಮುಖ್ಯಮಂತ್ರಿಗಳಿಗೆ ವಿವರಿಸಿ ಮನವಿ ಸಲ್ಲಿಸಿದರು.

ಮರಳು ಫಿಲ್ಟರ್‍ ದಂಧೆ ತಡೆಯಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಸಮಸ್ಯೆಗಳ ನಿವಾರಣೆಯಾಗಬೇಕು. ಸಮಾಜ ಕಲ್ಯಾಣ ಇಲಾಖೆ ಸುಧಾರಣೆಯಾಗ­ಬೇಕು ಎಂದು ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಮುಖರು ಮನವಿ ಸಲ್ಲಿಸಿದರು.

ನಗರದ ಜನತೆಗೆ ನೀರು ಪೂರೈಸಲು ಪೈಪ್ ಲೈನ್‍ ಯೋಜನೆಯನ್ನು ಶೀಘ್ರ ರೂಪಿಸಿ ಅನುಷ್ಠಾನ­ಗೊಳಿಸಬೇಕು ಎಂದು ನಗರಸಭೆಯ ಸದಸ್ಯರು ಮನವಿ ಸಲ್ಲಿಸಿದರು.

ಮಾದಿಗ ಮತ್ತು ಅದರ ಉಪಜಾತಿಯವರಿಗೆ ಮಾದಿಗರ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸ­ಬೇಕು. ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸು­ತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ಮಾದಿಗ ದಂಡೋರ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಕಾಲುಬಾಯಿ ಜ್ವರದಿಂದ ಸತ್ತ ಹಸುಗಳ ಮಾಲೀಕರಿಗೆ  ಪರಿಹಾರ ನೀಡಬೇಕು. ನರಸಾಪುರ-- ವೇಮಗಲ್ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ನರಸಾಪುರದ ಕಲ್ಲುಪುಡಿ ಮಾಡುವ ಘಟಕಗಳನ್ನು ಸ್ಥಳಾಂತರಿ­ಸಬೇಕು ಎಂದು ಆಗ್ರಹಿಸಿ ಪ್ರಾಂತ ರೈತ ಸಂಘದ ಪ್ರಮುಖರು ಮನವಿ ಸಲ್ಲಿಸಿದರು.

ಗ್ರಾಮೀಣ ವಿವಿಧೋದ್ದೇಶ ಪುನರ್ವಸತಿ ಕಾರ್ಯ­ಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸ­ಬೇಕು. ಸೇವಾ ಭದ್ರತೆ, ಆರೋಗ್ಯ ವಿಮೆ, ಭವಿಷ್ಯ ನಿಧಿಯನ್ನು ಒದಗಿಸಬೇಕು. ಅಂಗವಿಕಲರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಬೇಕು ಎಂದು ಕಾರ್ಯಕರ್ತರು ಮನವಿ ಸಲ್ಲಿಸಿದರು.

ಪ್ರವಾಸೋದ್ಯಮ ಇಲಾಖೆ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳು ಪ್ರವಾಸಿ ಟ್ಯಾಕ್ಸಿ ಚಾಲಕರಿಗೆ ನೀಡಿರುವ ಸಾಲವನ್ನು ಪೂರ್ಣ ಮನ್ನಾ ಮಾಡಬೇಕು ಎಂದು ಕೋರಿ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಮನವಿ ಸಲ್ಲಿಸಿದರು.

ಮಹಿಳೆಯರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ಮಂಗಳಮುಖಿಯವರಿಗೆ ಮಾಸಿಕ ವೇತನ ಕೇವಲ 500 ರೂಪಾಯಿ ನೀಡಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ 3 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಮಹಿಳಾ ಜಾಗೃತಿ ವೇದಿಕೆ ಪ್ರಮುಖರು ಮನವಿ ಸಲ್ಲಿಸಿದರು. ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಪೊಲೀಸ್ ಠಾಣೆಯಲ್ಲಾಗಲ, ನ್ಯಾಯಲಯದಲ್ಲಾಗಲಿ ನಿಗದಿತ ಅವಧಿತಯೊಳಗೆ ಇತ್ಯರ್ಥವಾಗುತ್ತಿಲ್ಲ ಎಂದೂ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.