ADVERTISEMENT

ಬತ್ತಿದ ಕೆರೆಗಳ ನಡುವೆ ಬೆಮೆಲ್ ಓಯಸಿಸ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 8:00 IST
Last Updated 1 ಮಾರ್ಚ್ 2012, 8:00 IST
ಬತ್ತಿದ ಕೆರೆಗಳ ನಡುವೆ ಬೆಮೆಲ್ ಓಯಸಿಸ್
ಬತ್ತಿದ ಕೆರೆಗಳ ನಡುವೆ ಬೆಮೆಲ್ ಓಯಸಿಸ್   

ಕೆಜಿಎಫ್: ಬೇಸಿಗೆ ಕುರುಹು ಈಗಾಗಲೇ ಗೋಚರಿಸಲಾರಂಭಿಸಿದೆ. ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಮುಂದಿನ ಬೇಸಿಗೆಯ ಚಿತ್ರಣ ಹೇಗಿರಬಹುದೆಂಬ ಕಲ್ಪನೆ ಯಿಂದಾಗಿ ನಗರ ಮತ್ತು ಗ್ರಾಮೀಣ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
 
ಇಂತಹ ಸಂದರ್ಭದಲ್ಲಿ ನೀರಿನ ಆಸರೆ ಸಿಕ್ಕರೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತೆಯೇ. ಇಂತಹ ಬಯಲು ನಾಡಿದ ಓಯಸಿ ಸ್‌ನ್ನು  ಬೆಮೆಲ್ ಆಡಳಿತ ವರ್ಗ ಸೃಷ್ಟಿಸಿದೆ. ಬೆಮೆಲ್ ಎಚ್ ಅಂಡ್ ಪಿ ಹಿಂಭಾಗದ ಸಣ್ಣ ಕೆರೆ  ನೀರಿಲ್ಲದೆ ಬಿರುಕು ಬಿಟ್ಟ ಸುತ್ತಮುತ್ತಲಿನ ಕೆರೆಗಳಿ ಗಿಂತ ಭಿನ್ನವಾಗಿದೆ.

ಬೆಮೆಲ್ ಆರ್ ಅಂಡ್ ಡಿ ಮತ್ತು ಎಚ್ ಅಂಡ್ ಪಿ ಹಿಂಭಾಗದಲ್ಲಿ ನೂರಾರು ಎಕರೆ ಪ್ರದೇಶ ವನ್ನು ಬಿಜಿಎಂಎಲ್‌ನಿಂದ ಬೆಮೆಲ್ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದೆ. ಇದು ನಿಷಿದ್ಧ ಪ್ರದೇಶವಾದರೂ ಮೊದಲಿನಿಂದಲೂ ಸುತ್ತಮುತ್ತ ಲಿನ ಗ್ರಾಮಗಳಿಗೆ ಗೋಮಾಳವಾಗಿತ್ತು.
 
ಹುಲ್ಲು  ಮೇಯಲು ನೂರಾರು ಹಸುಗಳು, ಕುರಿಗಳು ಹಾಗೂ ಕೃಷ್ಣಮೃಗಗಳಿಗೆ ಈ ಸ್ಥಳ ಪ್ರಶಸ್ತ ವಾಗಿತ್ತು. ಮಳೆಗಾಲದಲ್ಲಿ ಅಚ್ಚ ಹಸಿರಿನಿಂದ ಕೂಡಿರುತ್ತಿದ್ದ ಬಯಲು ಬೇಸಿಗೆ ಸಮೀಪಿಸಿದಂತೆ ಒಣಗಲು ಶುರುವಾಗುತ್ತದೆ.

ಬಯಲಿನಲ್ಲಿರುವ ರಾಜಕಾಲುವೆಗಳಲ್ಲಿ ನೀರಿನ ಪಸೆ ಆವಿಯಾಗುತ್ತದೆ. ರಾಜಕಾಲುವೆಯಲ್ಲಿ ಕೊಂಚ ಹುಲ್ಲು ಬಿಟ್ಟರೆ ಉಳಿದ ಪ್ರದೇಶ ಬಟ್ಟ ಬಯಲಿನಂತಾಗುತ್ತದೆ. ಇದೇ ವಾತಾವರಣವನ್ನು ಹೊಂದಿರುವ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕೆರೆ ಬಟ್ಟಬಯಲಿ ನಂತಾಗುತ್ತದೆ.
 
ಗ್ರಾಮಗಳ ಕ್ರಿಕೆಟ್ ಪ್ರಿಯರಿಗೆ ತಾತ್ಕಾಲಿಕ ಮೈದಾನವಾಗಿ ಪರಿವರ್ತನೆಯಾ ಗುತ್ತದೆ. ಇಂತಹ ಸನ್ನಿವೇಶದಲ್ಲಿ ಜಾನುವಾರು ಗಳನ್ನು ಹೊಂದಿರುವವರ ಪಾಡು ಹೇಳತೀರದು. ಮನುಷ್ಯರಿಗೇ ಕುಡಿಯಲು ನೀರಿಲ್ಲದೆ ಇರುವಾಗ ಇನ್ನು ಜಾನುವಾರುಗಳಿಗೆ ನೀರನ್ನು ಒದಗಿಸುವುದು ಹೇಗೆ ಎಂಬ ಚಿಂತೆ ರೈತಾಪಿ ಕುಟುಂಬಗಳಲ್ಲಿ ಮೂಡಲು ಶುರುವಾಗುತ್ತದೆ.

ಇಂತಹ ಎಲ್ಲ ಸಮಸ್ಯೆಗಳಿಗೂ ಬೆಮೆಲ್ ಆಡಳಿತ ವರ್ಗ ಪರಿಹಾರ ನೀಡಿದೆ. ಮಳೆ ನೀರು ಹರಿದು ಬರುವ ಕಾಲುವೆಯಲ್ಲಿ ಬೃಹತ್ ಚೆಕ್ ಡ್ಯಾಂ ನಿರ್ಮಾಣ ಮಾಡಿದೆ. ವೈಜ್ಞಾನಿಕವಾಗಿ ಅದನ್ನು ಚೆಕ್‌ಡ್ಯಾಂ ಎಂದು ಕರೆಯಲಾಗದಿದ್ದರೂ, ಕಾಲುವೆ ಯಲ್ಲಿ ವ್ಯರ್ಥವಾಗಿ ಹರಿದುಹೋಗುತ್ತಿದ್ದ ಮಳೆ ನೀರನ್ನು ತಡೆಗೋಡೆ ನಿರ್ಮಿಸಿ ಶೇಖರಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶವನ್ನು ಅಚ್ಚಹಸಿರಿನಿಂದ ಕೂಡಿರುವಂತೆ ಮಾಡಲಾಗಿದೆ.

ಬೆಮೆಲ್‌ನ ಈ ಚೆಕ್‌ಡ್ಯಾಂಗೆ ಈಗ ಬಹಳ ಮಹತ್ವ ದೊರೆತಿದೆ. ಪ್ರತಿನಿತ್ಯ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಹಸುಗಳು, ಬಯಲಿನಲ್ಲಿ ವಿಹರಿಸುವ ಜಿಂಕೆಗಳಿಗೆ ಆಶ್ರಯತಾಣವಾಗಿದೆ. ಒಂದೆಡೆ ನೀರು ಇನ್ನೊಂದೆಡೆ ಭದ್ರತೆ.

ಎರಡನ್ನೂ ಹೊಂದಿರುವ ಈ ಪ್ರದೇಶದಲ್ಲಿ ಬ್ಲಾಕ್‌ಬಗ್ ಎಂದು ಕರೆಯಲಾಗುವ ಜಿಂಕೆಗಳು ಸ್ವಚ್ಚಂದವಾಗಿ ವಿಹರಿಸುತ್ತಿರುತ್ತವೆ. ಕಡು ನೀಲಿ ಬಣ್ಣದ ಈ ಪುಟ್ಟ ಕೆರೆಯ ಸುತ್ತ ಇರುವ ಮರಗಳು ವಿವಿಧ ಜಾತಿಯ ಹಕ್ಕಿಗಳಿಗೂ ಆಶ್ರಯವನ್ನು ಒದಗಿಸಿದೆ.
 
ಮುಂಜಾನೆ ಮತ್ತು ಸಂಜೆ ಹಕ್ಕಿಗಳ ನಿನಾದ ಪರಿಸರ ಪ್ರೇಮಿಗಳಿಗೆ ಮುದ ನೀಡುತ್ತದೆ.
ಈಚೆಗೆ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮನೋಜ್‌ಕುಮಾರ್‌ಮೀನ ಬೆಮೆಲ್ ಅಧಿಕಾರಿ ಗಳ ಶ್ರಮಕ್ಕೆ ಶಹಬ್ಬಾಸ್ ಕೊಟ್ಟಿದ್ದರು.
 
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿ.ಆರ್.ಎಸ್. ನಟರಾಜನ್ ಅವರಿಗೂ ಪ್ರಿಯ. ಜಾನುವಾರು ಗಳಿಗೆ ಹಾಗೂ ಮುಖ್ಯವಾಗಿ ಜಿಂಕೆಗಳಿಗೆ ನೀರಿನ ಕೊರತೆಯಾಗಬಾರದೆಂದು ಸೂಚನೆ ನೀಡಿದ್ದಾರೆ ಎಂದು ಬೆಮೆಲ್‌ನ ಡಿಜಿಎಂ ನಾಗೇಶ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.