ADVERTISEMENT

ಬತ್ತಿದ ನೆಲ ತಂದ ಜಲಬಾಧೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 8:15 IST
Last Updated 3 ಏಪ್ರಿಲ್ 2012, 8:15 IST

ಶ್ರೀನಿವಾಸಪುರ: ಬಿರು ಬೇಸಿಗೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಂದೊಡ್ಡಿದೆ. ಕೆರೆ ಕುಂಟೆಗಳು ಬತ್ತಿಹೋಗಿವೆ. ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಕೊಳವೆ ಬಾವಿಗಳು ಬರಿದಾಗಿವೆ. ಕುಡಿಯುವ ನೀರು ಪೂರೈಕೆಯನ್ನು ವಹಿಸಿಕೊಂಡಿರುವ ಇಲಾಖೆ ಲೆಕ್ಕವಿಲ್ಲದಷ್ಟು ಕೊಳವೆ ಬಾವಿಗಳನ್ನು ಕೊರೆಯುತ್ತಿದೆ. ಆದರೆ ಅಂತರ್ಜಲದ ಕೊರತೆ ಕಾಡುತ್ತಿದೆ.

ಕೊಳವೆ ಬಾವಿ ಕೊರೆಯಲು ಸಂಪನ್ಮೂಲದ ಕೊರತೆ ಇಲ್ಲ. ಸಾವಿರ ಅಡಿಗಿಂತ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಆದರೂ ಪ್ರಯತ್ನ ಮಾತ್ರ ನಿಂತಿಲ್ಲ. ಮೀಸಗಾನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ 10 ಕೊಳವೆ ಬಾವಿಗಳನ್ನು ನಿರ್ಮಿಸಲಾಗಿದೆ. ಪನಸಮಾಕನಹಳ್ಳಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಸಲುವಾಗಿ ಕೊಳವೆ ಬಾವಿಯನ್ನು ಸಾವಿರ ಅಡಿ ಕೊರೆದರೂ ನೀರು ಸಿಗಲಿಲ್ಲ.

ಇಂಥ ನಿದರ್ಶನಗಳು ಹಲವು. ತಾಲ್ಲೂಕಿನಲ್ಲಿ ಈ ಬೇಸಿಗೆಯಲ್ಲಿ ಒಟ್ಟು 231 ಹೊಸ ಕೊಳವೆ ಬಾವಿಗಳನ್ನು ನಿರ್ಮಿಸಲಾಗಿದೆ. ಆ ಪೈಕಿ 173 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. 58 ಕೊಳವೆ ಬಾವಿಗಳು ವಿಫಲವಾಗಿವೆ. 159 ಕೊಳವೆ ಬಾವಿಗಳಿಗೆ ಪಂಪ್ ಸೆಟ್ ಅಳವಡಿಸಲಾಗಿದೆ. 8 ಕೊಳವೆ ಬಾವಿಗಳಿಗೆ ಪಂಪ್ ಸೆಟ್ ಅಳವಡಿಸಬೇಕಾಗಿದೆ. ಈ ಕೆಲಸವನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ ಎಂದು ಜಿ.ಪಂ. ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೈ.ಎಂ.ವೆಂಕಟರಾಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಕಸಬಾ ಹೋಬಳಿ ಬಿಟ್ಟರೆ ಉಳಿದ ಕಡೆ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ರೋಣೂರು ಹೋಬಳಿಯ ಅರ್ಧ ಭಾಗದಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ. ರಾಯಲ್ಪಾಡ್ ಮತ್ತು ನೆಲವಂಕಿ ಹೋಬಳಿಯಲ್ಲಿ ತೀವ್ರ ಸಮಸ್ಯೆ ಇಲ್ಲ. ಕೆಲವು ಕಡೆಗಳಲ್ಲಿ ತಾಂತ್ರಿಕ ಸಮಸ್ಯೆ ನೀರಿನ ಪೂರೈಕೆಗೆ ಅಡ್ಡಿಯಾಗಿದೆ.

ಕೆಲವು ಕೊಳವೆ ಬಾವಿಗಳಲ್ಲಿ ಆಳಕ್ಕೆ ಪೈಪ್ ಇಳಿಸಿದರೆ ನೀರು ಸಿಗುತ್ತದೆ. ನೀರು ಮುಗಿದಿರುವ ಕೊಳವೆ ಬಾವಿಗಳಿಗೆ ಅಳವಡಿಸಲಾಗಿರುವ ಪಂಪ್‌ಸೆಟ್ ಮತ್ತು ಪೈಪ್‌ಗಳನ್ನು ಹೊಸ ಕೊಳವೆ ಬಾವಿಗಳಿಗೆ ಅಳವಡಿಸಬಹುದು. ಆದರೆ ಕೆಲವು ಕಡೆ ಅದನ್ನು ತೆಗೆಯಲು ಸ್ಥಳೀಯರು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

ಕೆಲವು ಗ್ರಾಮಗಳಲ್ಲಿ ಲಭ್ಯವಿರುವ ನೀರಿನ ಹಂಚಿಕೆ ಸರಿಯಾಗಿ ಆಗುತ್ತಿಲ್ಲ. ನೀರಿನ ಕೊಳವೆ ಮಾರ್ಗದ ಪ್ರಾರಂಭದ ಮನೆಗಳವರು, ಮುಖ್ಯ ಕೊಳವೆಗೆ ಪೈಪ್ ಅಳವಡಿಸಿಕೊಂಡು ಹೆಚ್ಚಿನ ನೀರನ್ನು ಬಳಸಿಕೊಳ್ಳುವುದರಿಂದ, ಎತ್ತರ ಪ್ರದೇಶದ ಮನೆಗಳಿಗೆ ನೀರು ಹೋಗುವುದಿಲ್ಲ. ಇನ್ನು ಕೆಲವರು ತಮ್ಮ ಮನೆಗಳ ಸಮೀಪ ದೊಡ್ಡ ತೊಟ್ಟಿಗಳನ್ನು ನಿರ್ಮಿಸಿಕೊಳ್ಳುವುದರಿಂದ ಅಧಿಕ ಪ್ರಮಾಣದ ನೀರು ತೊಟ್ಟಿಗಳಲ್ಲಿಯೇ ಉಳಿಯುತ್ತದೆ.

 ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಸಾಮಾನ್ಯ. ಗ್ರಾಮೀಣ ಮಹಿಳೆಯರು ವಿದ್ಯುತ್‌ಗಾಗಿ ಕಾದು ಕುಳಿತಿರುತ್ತಾರೆ. ವಿದ್ಯುತ್ ಬಂದೊಡನೆ  ನೀರು ಬರುವ ಕಡೆ ಗುಂಪುಗೂಡಿ ನೀರನ್ನು ಹಿಡಿಯುವ ದೃಶ್ಯ ಎಲ್ಲೆಲ್ಲೂ ಕಂಡುಬರುತ್ತದೆ. ಈ ಸಂದರ್ಭದಲ್ಲಿ ತಳ್ಳಾಟ, ತಕರಾರು ಸಾಮಾನ್ಯ. ಇಷ್ಟಾದರೂ ಬೇಕಾದಷ್ಟು ನೀರು ಸಿಗುವುದು ಅಪರೂಪ.

  ಕುಡಿಯುವ ನೀರು ಪೂರೈಕೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ನೀರಿನ ಅಗತ್ಯ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇದರಿಂದ ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗಿದೆ. ಕೊಳವೆ ಬಾವಿಯಲ್ಲಿ ನೀರು ಮುಗಿದಾಗ, ಪಂಪ್ ಸೆಟ್ ಕೆಟ್ಟಾಗ ಅಥವಾ ದುರಸ್ತಿ ಸಂದರ್ಭದಲ್ಲಿ ಈ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ.

ತಾಲ್ಲೂಕಿನ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿದ್ದಾರೆ. ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಕುಡಿಯುವ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಅಧಿಕಾರಿಗಳು ನೀರಿನ ಬವಣೆ ನೀಗಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಕಡಿಮೆಯಾಗಿದೆ.

 ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ಪಟ್ಟಣದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಸ್ಥಳೀಯ ಆಡಳಿತ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಪಟ್ಟಣದ ಜನತೆ ನೀರನ್ನು ಪಡೆದುಕೊಳ್ಳುತ್ತಿದ್ದಾರೆ. ತಾಲ್ಲೂಕಿನ ಕೆರೆ ಕುಂಟೆಗಳು ಬತ್ತಿಹೋಗಿರುವುದರಿಂದ ಜಾನುವಾರು ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿದೆ. ಜಾನುವಾರುಗಳೂ ಸಹ ಕೊಳವೆ ಬಾವಿಗಳ ನೀರನ್ನು ಆಶ್ರಯಿಸಿವೆ. ಜನರ ಜೊತೆಗೆ ಜಾನುವಾರುಗಳ ದಾಹವನ್ನೂ ನೀಗಬೇಕಾದ ಅನಿವಾರ್ಯತೆ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.