ADVERTISEMENT

ಬಲವಂತ ಸಹಿ: ಬಿಜೆಪಿ ಸದಸ್ಯರ ದೂರು

ಪ್ರಜಾವಾಣಿ ವಿಶೇಷ
Published 16 ಮಾರ್ಚ್ 2012, 7:50 IST
Last Updated 16 ಮಾರ್ಚ್ 2012, 7:50 IST

ಕೋಲಾರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಜೆಡಿಎಸ್‌ನ 2ನೇ ಯತ್ನ ನಾಟಕೀಯ ತಿರುವು ಪಡೆದಿದೆ.

ಶುಕ್ರವಾರ ಜಿಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ. ಅದಕ್ಕೆ ಮುನ್ನಾ ದಿನವಾದ ಗುರುವಾರ ಬಿಜೆಪಿಯ ಸದಸ್ಯರಾದ ನಾರಾಯಣಮ್ಮ, ಮುತ್ಯಾಲಮ್ಮ ಮತ್ತು ಸಿಮೌಲ್ ಮೋಹನ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವಿಶ್ವಾಸ ನಿರ್ಣಯ ಮಂಡಿಸುವ ಪತ್ರಕ್ಕೆ ತಮ್ಮನ್ನು ಯಾಮಾರಿಸಿ ಸಹಿ ಹಾಕಿಸಿಕೊಳ್ಳಲಾಗಿದೆ ಎಂಬುದು ದೂರಿನ ಪ್ರಮುಖ ಅಂಶ.

ಆದರೆ ಬಲವಂತ ಮಾಡಿದವರು ಯಾರು ಎಂಬ ಬಗ್ಗೆ ಸದಸ್ಯರು ಸ್ಪಷ್ಟ ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ಅವರ ದೂರು ಊರ್ಜಿತಗೊಳ್ಳುವ ಸಾಧ್ಯತೆಯೂ ಇಲ್ಲ ಎಂಬುದು ಅಧಿಕಾರಿಗಳ ನುಡಿ.
ಜಿಪಂ ಸಾಮಾನ್ಯ ಸಭೆ ಶುಕ್ರವಾರ ನಡೆಯಲಿದೆ. ಗುರುವಾರ ನಡೆದಿರುವ ನಾಟಕೀಯ ಬೆಳವಣಿಗೆ ಈ ಸಭೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ.

ಸಭೆಯಿಂದ ದೂರ ಉಳಿಯಲು ಅಥವಾ ಅಸಹಕಾರ ವ್ಯಕ್ತಪಡಿಸಲು, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪಕ್ಷವಾದ ಜೆಡಿಎಸ್ ಸದಸ್ಯರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಬಳಿಕ ನಡೆದ ಒಪ್ಪಂದಂತೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪದೆ ತಟಸ್ಥವಾಗಿರುವ ಕಾಂಗ್ರೆಸ್‌ನ ನಡೆಯೂ ಕುತೂಹಲ ಮೂಡಿಸಿದೆ. ಮೂರೂ ಪಕ್ಷಗಳಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟ ಶುಕ್ರವಾರದ ಸಭೆಯಲ್ಲಿ ಹೊರಬೀಳುವ ಸಾಧ್ಯತೆಗಳಿವೆ.

ಹಿನ್ನೆಲೆ:
ಹಿಂದುಳಿದ ವರ್ಗದ ಎ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ, ಲಕ್ಕೂರು ಕ್ಷೇತ್ರ ಸದಸ್ಯೆ ಮಂಜುಳಾ ಅವರಿಗೆ ಅವಿರೋಧವಾಗಿ ದೊರಕಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಆ ವರ್ಗದ ಸದಸ್ಯರೇ ಇರಲಿಲ್ಲ. ಆ ಸ್ಥಾನಕ್ಕೆ ಅರ್ಹರಾಗಿದ್ದ ಬಿಜೆಪಿಯ ಕಾಮಸಮುದ್ರಂ ಕ್ಷೇತ್ರದ ಸಿಮೌಲ್ ಮೋಹನ್ ಮತ್ತು ವರ್ತೂರು ಬಣದ ಪಕ್ಷೇತರ ಸದಸ್ಯೆ, ವೇಮಗಲ್ ಕ್ಷೇತ್ರದ ಭಾರತಿಯವರಿಗೆ ಅವಕಾಶ ದೊರಕಲಿಲ್ಲ. 10 ತಿಂಗಳ ಅವಧಿ ಪೂರ್ಣಗೊಂಡ ಬಳಿಕ ಅಧ್ಯಕ್ಷೆ ಮಂಜುಳಾ ಅಧಿಕಾರ ಹಸ್ತಾಂತರಿಸಬೇಕಿತ್ತು.

ಭಾರತಿಯವರು ಅನಾರೋಗ್ಯದಿಂದ ತೀರಿಕೊಂಡ ಹಿನ್ನೆಲೆಯಲ್ಲಿ ಮಂಜುಳಾ ಮುಂದುವರಿದರು. ನಂತರ ಉಪ ಚುನಾವಣೆ ನಡೆದು ಜೆಡಿಎಸ್‌ನ ಆಶಾ ಗೆದ್ದರು. ಆ ಹಿನ್ನೆಲೆಯಲ್ಲಿ ಜೆಡಿಎಸ್ ಕಾಂಗ್ರೆಸ್ ನಡುವೆ ಒಪ್ಪಂದ ಏರ್ಪಟ್ಟು, ಆಶಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವ ಪ್ರಯತ್ನ ಶುರುವಾಯಿತು. ಅಧ್ಯಕ್ಷರ ವಿರುದ್ಧ ಎರಡೂ ಪಕ್ಷದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವ ಪತ್ರವನ್ನು ಅಧ್ಯಕ್ಷೆ ಮಂಜುಳಾ ಅವರಿಗೆ ಸಲ್ಲಿಸಿದರು. ಅದೇ ಕಾರಣದಿಂದ ಮಂಜುಳಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.

ಈ ನಡುವೆ, ಉಪಾಧ್ಯಕ್ಷ ಸ್ಥಾನವನ್ನು ಒಪ್ಪಂದದಂತೆ ಜೆಡಿಎಸ್‌ನ ಸೋಮಶೇಖರ್ ಬಿಟ್ಟುಕೊಟ್ಟರು. ಕಾಂಗ್ರೆಸ್‌ನ ಡಿ.ವಿ.ಹರೀಶ್ ಉಪಾಧ್ಯಕ್ಷರಾದರು. ನಂತರ ಅಧ್ಯಕ್ಷ ಸ್ಥಾನ ದೊರಕಿಸಿಕೊಳ್ಳುವ ದಾರಿ ಸುಲಭವಾಗಬಹುದು ಎಂಬ ಜೆಡಿಎಸ್ ನಿರೀಕ್ಷೆ ಈಡೇರುವ ಬದಲು, ಕಾಂಗ್ರೆಸ್‌ನ ತಟಸ್ಥ ನೀತಿ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಜೆಡಿಎಸ್ ಸದಸ್ಯರು, ಪ್ರಮುಖರು ಕಾಂಗ್ರೆಸ್‌ನ ಕಾರ್ಯಕರ್ತರು, ಪ್ರಮುಖರೊಡನೆ ಸೌಹಾರ್ದದಿಂದ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರು ತಮ್ಮ ತಟಸ್ಥ ನಿಲುವನ್ನು ಸಮರ್ಥಿಸಿಕೊಂಡಿದ್ದರು.

ಅವಿಶ್ವಾಸ: ಇದೀಗ ಜೆಡಿಎಸ್‌ನ ಒಟ್ಟು 12 ಸದಸ್ಯರು, ಬಿಜೆಪಿಯ ಮೂವರು ಸದಸ್ಯರು, ಕೋಲಾರ ಮತ್ತು ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೇರಿದಂತೆ 18 ಮಂದಿ ಸಹಿ ಮಾಡಿ ಅವಿಶ್ವಾಸ ನಿರ್ಣಯ ಮಂಡಿಸಲು ಕೋರಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಶುಕ್ರವಾರದ ಸಭೆಯಲ್ಲಿ ಇದು ಬೀರಲಿರುವ ಪರಿಣಾಮವನ್ನು ಕಾದು ನೋಡಬೇಕಾಗಿದೆ. ಸಭೆ ನಡೆದರೂ ನಮ್ಮ ಸಹಕಾರವಿರುವುದಿಲ್ಲ ಎಂದು ಜೆಡಿಎಸ್ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.