ADVERTISEMENT

ಬಸ್ ಸಂಚಾರಕ್ಕೆ ಆಗ್ರಹಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 8:05 IST
Last Updated 24 ಫೆಬ್ರುವರಿ 2012, 8:05 IST

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಸಮೀಪದ ಚಿಲ್ಲೋರಿಪಲ್ಲಿ ಗ್ರಾಮದ ಸಮೀಪ ರಸ್ತೆ ಸಾರಿಗೆ ಬಸ್ ಸಂಚಾರ ಪುನರಾರಂಭ ಮಾಡುವಂತೆ ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಬುಧವಾರ ರಸ್ತೆ ತಡೆ ನಡೆಸಿದರು.

ಕಳೆದ ಎರಡು ದಶಕಗಳಿಂದ ಶ್ರೀನಿವಾಸಪುರ ಮರಸನಪಲ್ಲಿ ಮಾರ್ಗವಾಗಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಸೇವೆಯನ್ನು ನಿಲ್ಲಿಸಲಾಗಿದೆ.

ಇದರಿಂದ ಗಡಿ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ತಾಲ್ಲೂಕು ಕೇಂದ್ರದಲ್ಲಿನ ಕಚೇರಿ ಹಾಗೂ ಮಾರುಕಟ್ಟೆಗೆ ಹೋಗುವ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಬಸ್ ಸೇವೆ ಸ್ಥಗಿತಗೊಳಿಸುವ ಮೂಲಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬಸ್ ಸಂಚಾರ ನಿಲ್ಲಿಸಿರುವುದರ ಹಿಂದೆ ಕೆಲವು ಖಾಸಗಿ ಬಸ್ ಮಾಲೀಕರ ಕೈವಾಡವಿದೆ.
 
ಈ ಬಸ್ ಸೇವೆ ನಿಲ್ಲಿಸಿ ದಿನದಿಂದ ಈ ರಸ್ತೆಯಲ್ಲಿ ಜನ ಬಸ್‌ಗಾಗಿ ಪರದಾಡುವುದು ಸಾಮಾನ್ಯವಾಗಿದೆ ಎಂದರು. ಬಸ್ ಸೇವೆ ಮತ್ತೆ ಪ್ರಾರಂಭಿಸುವಂತೆ ಒತ್ತಾಯಿಸಿದರು.

ಈಗ ನಿಲ್ಲಿಸಲಾಗಿರುವ ಬಸ್ ಅಂತರ ರಾಜ್ಯ ಸಂಚಾರ ನಿಯಮಕ್ಕೆ ಒಳಪಟ್ಟಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ಸೇವೆ ನವೀಕರಿಸಬೇಕಾಗುತ್ತದೆ. ನವೀಕರಣ ಆಗದ ಪರಿಣಾಮ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ಸಿಬ್ಬಂದಿ ತಿಳಿಸಿದರು.

ವಿದ್ಯಾರ್ಥಿಗಳು, ನಾಗರಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಈ ಮಾರ್ಗವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುವುದು ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಭರವಸೆ ನೀಡಿದ ನಂತರ ರಸ್ತೆ ತಡೆ ಪ್ರತಿಭಟನೆ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.