ADVERTISEMENT

ಬಾರದ ಮಳೆಗೆ ಕಾದು ಕುಳಿತ ಕೃಷಿಕರು

ಪ್ರಜಾವಾಣಿ ವಿಶೇಷ
Published 3 ಆಗಸ್ಟ್ 2013, 12:25 IST
Last Updated 3 ಆಗಸ್ಟ್ 2013, 12:25 IST

ಶ್ರೀನಿವಾಸಪುರ:  ತಾಲ್ಲೂಕಿನಲ್ಲಿ ಮಳೆ ಅಭಾವ ಮುಂದುವರೆದಿದ್ದು, ರೈತರು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ ಹಸಿರು ಮೇವು ಹಾಗೂ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ತಿಂಗಳಿಂದಲೂ ಭೊರ್ಗರೆಯುವ ಗಾಳಿ, ಮೋಡ ಮುಸುಕಿದ ವಾತಾವರಣ ಬಿಟ್ಟರೆ ಮಳೆಯ ಸುಳಿವೇ ಇಲ್ಲ. ರಾಗಿ ಬಿತ್ತನೆ ಮಾಡಲು ಕಾಲ ಮೀರುತ್ತಿರುವುದರಿಂದ ಕೆಲವು ರೈತರು ಸಸಿ ಮಡಿಗಳಲ್ಲಿ ರಾಗಿ ಪೈರು ಬೆಳೆಸಿದ್ದಾರೆ. ಮಳೆಯಾದರೆ ಜಮೀನು ಹದಮಾಡಿ ಪೈರು ನಾಟಿ ಮಾಡುವ ಉದ್ದೇಶ ಅವರದಾಗಿದೆ.

ಮಳೆಯಾಗುವುದು ತಡವಾಗುತ್ತಿರುವುದರಿಂದ ಹಾಗೆ ಬೆಳೆಯಲಾಗಿರುವ ಪೈರೂ ಸಹ ಕೆಲವು ಕಡೆಗಳಲ್ಲಿ ಬಲಿತು ಹೋಗಿದೆ. ಆದರೆ ಅಪರೂಪಕ್ಕೆ ಆಂಧ್ರಪ್ರದೇಶದ ಗಡಿ ಸಮೀಪದ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ನೆಲಗಡಲೆ ಬೆಳೆ ಹುಲುಸಾಗಿ ಬೆಳೆದಿದೆ. ಇನ್ನು ಒಂದು ಹದ ಮಳೆ ಸುರಿದರೆ ಸಾಕು ಕಾಯಿ ಕೈಗೆ ಸಿಗುತ್ತದೆ ಎಂದು ಅಲ್ಲಿನ ರೈತರು ಹೇಳುತ್ತಾರೆ. ಆದರೆ ಆ ಒಂದು ಹದ ಮಳೆ ಬರುವುದಾದರೂ ಎಂದು ಪ್ರಶ್ನೆ ಅವರನ್ನು ಕಾಡುತ್ತಿದೆ.

ಬಿರುಗಾಳಿ, ಮೋಡ ಮುಸುಕಿದ ವಾತಾವರಣದಿಂದ ನಾಗರಿಕರ ಬದುಕು ಅಸಹನೀಯವಾಗಿದೆ. ಎಂದೂ ಈ ರೀತಿ ಗಾಳಿ ಬೀಸಿದ್ದಿಲ್ಲ. ಈ ಹಾಳು ಗಾಳಿಯಿಂದಾಗಿಯೇ ಮಳೆ ಬರುತ್ತಿಲ್ಲ ಎಂದು ಶಪಿಸುವ ಜನರಿಗೂ ಕೊರತೆ ಇಲ್ಲ. ಮಳೆಗಾಗಿ ದೀಪೋತ್ಸವ, ಕಪ್ಪೆಗಳ ಮದುವೆ ಮುಂತಾದ ವಿಧಿಗಳನ್ನು ನೆರವೇರಿಸುವುದರಲ್ಲಿ ಗ್ರಾಮೀಣರು ನಿರತರಾಗಿದ್ದಾರೆ. ಆದರೆ ಮಳೆ ಮಾತ್ರ ಬರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.