ADVERTISEMENT

ಬಿಜೆಪಿ ಕಳಂಕಿತರ ವಿರುದ್ಧ ಶ್ರೀರಾಮುಲು ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 9:05 IST
Last Updated 21 ಫೆಬ್ರುವರಿ 2012, 9:05 IST

ಕೆಜಿಎಫ್: ಹಗರಣಗಳಲ್ಲಿ ಸಿಕ್ಕಿರುವ ಬಿಜೆಪಿಯ ಸಚಿವರು, ಶಾಸಕರನ್ನು ಕಾಯಂ ಆಗಿ ತೀರ್ಥಯಾತ್ರೆಗೆ ಕಳುಹಿಸಲು ಜನ ಸಿದ್ಧರಾಗಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಕಮ್ಮಸಂದ್ರದಲ್ಲಿ ಸೋಮವಾರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಗರಣಗಳ ಸರಮಾಲೆ ಹೊತ್ತಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜನರ ಆಪೇಕ್ಷೆಗಳನ್ನು ನುಚ್ಚುನೂರು ಮಾಡಿದರು. ಕೇಂದ್ರ ನಾಯಕರು ರಥ ಯಾತ್ರೆ ಮಾಡಿದರೆ, ಇವರು ಕಾಶಿಯಾತ್ರೆ ಮಾಡುತ್ತಿದ್ದಾರೆ. ಜನಸ್ಪಂದನವಿಲ್ಲದ, ಒಳಜಗಳದಿಂದ ಕೂಡಿರುವ ಬಿಜೆಪಿ ನಾಯಕರನ್ನು ತೀರ್ಥ ಯಾತ್ರೆ ಕಳುಹಿಸುವ ಕೆಲಸವನ್ನು ಜನ ಮಾಡುತ್ತಾರೆ ಎಂದರು.

ಮುಖ್ಯಮಂತ್ರಿಗಳನ್ನು ಕೆಳಗಿಳಿಸಬೇಕೆಂದು ಯಡಿಯೂರಪ್ಪ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅವರು ಸಂಪೂರ್ಣವಾಗಿ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ  ಬರದ ಪರಿಸ್ಥಿತಿ ಉಂಟಾಗಿದೆ. ಜನ ಗುಳೇ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಯಡಿಯೂರಪ್ಪ, ಮುಖ್ಯಮಂತ್ರಿ ಸದಾನಂದಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಪರಸ್ಪರ ಒಳಜಗಳದಲ್ಲಿ ತೊಡಗಿದ್ದಾರೆ. ಇವರೆಲ್ಲಾ ರಾಜೀನಾಮೆ ನೀಡಬೇಕು ಎಂದು ಶ್ರೀರಾಮುಲು ಹೇಳಿದರು.

ಬಿಜೆಪಿಗೆ ಗುಡ್‌ಬೈ ಹೇಳಿಯಾಗಿದೆ. ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಾನು ಸ್ಥಾಪನೆ ಮಾಡಿರುವ ಬಿಆರ್‌ಎಸ್ ಕಾಂಗ್ರೆಸ್ ಅಧಿಕೃತ ರಾಜಕೀಯ ಪಕ್ಷವಾಗಲು ಚುನಾವಣೆ ಆಯೋಗದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಮುಂದಿನ ಹತ್ತು ಹದಿನೈದು ದಿನಗಳಲ್ಲಿ ಹೊಸ ಪಕ್ಷ ಅಧಿಕೃತವಾಗಲಿದೆ. ನಂತರ ರಾಜ್ಯದಲ್ಲಿ ಪ್ರವಾಸ ಮಾಡಿ  ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತೇನೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.