ADVERTISEMENT

ಬೆಲೆ ಕುಸಿತ: ಕ್ಯಾಪ್ಸಿಕಂ ಬೆಳೆಗಾರ ಕಂಗಾಲು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 6:12 IST
Last Updated 27 ಡಿಸೆಂಬರ್ 2012, 6:12 IST

ಶ್ರೀನಿವಾಸಪುರ: ಈಗ ಕ್ಯಾಪ್ಸಿಕಂ (ದೊಣ್ಣೆ ಮೆಣಸಿನ ಕಾಯಿ) ಮತ್ತು ಬಜ್ಜಿ ಮೆಣಸಿನ ಕಾಯಿ ಬೆಳೆಗಾರರಿಗೆ ಬೆಲೆ ಕುಸಿತದ ಬಿಸಿ ತಟ್ಟಿದೆ. ಬೆಳೆಗೆ ಹಾಕಿದ ಬಂಡವಾಳವೂ ಕೈಗೆ ಬರದೆ ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಅನಿಶ್ಚಿತ ಟೊಮೆಟೊ ಬೆಲೆಯಿಂದ ಬೇಸತ್ತ ಕೆಲವು ರೈತರು, ಬಜ್ಜಿ ಮೆಣಸಿನ ಕಾಯಿ ಹಾಗೂ ಕ್ಯಾಪ್ಸಿಕಂ ಬೆಳೆದಿದ್ದಾರೆ. ಆದರೆ ಬಜ್ವಿ ಮೆಣಸಿನ ಕಾಯಿ ಬೆಲೆ ಕೆಜಿಯೊಂದಕ್ಕೆ ರೂ. 6 ರಿಂದ 10 ಇದೆ. ಕ್ಯಾಪ್ಸಿಕಂ ಬೆಲೆ ಅಷ್ಟೂ ಇಲ್ಲ. ಇದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.

ಒಳ್ಳೆ ಬೆಲೆ ಬರಬಹುದು ಎಂಬ ನಿರೀಕ್ಷೆಯಿಂದ ಬೆಳೆ ಮಾಡಿದೆ. ಈಗ ಬಜ್ಜಿ ಮೆಣಸಿನ ಕಾಯಿ ಬಿಡಿಸಿ ಮಾರುಕಟ್ಟೆಗೆ ಸಾಗಿಸಿದ ಖರ್ಚೂ ಹೊರಡುತ್ತಿಲ್ಲ. ತೋಟದಲ್ಲಿ ಬಿಟ್ಟರೆ ಹಣ್ಣಾಗಿ ಹಾಳಾಗುತ್ತದೆ ಎಂಬ ಕಾರಣಕ್ಕೆ ಬಿಡಿಸಿ ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಹಾಕುತ್ತಿದ್ದೇನೆ. ಒಳ್ಳೆ ಕಾಯಿಗೇ ಸರಿಯಾದ ಬೆಲೆ ಇಲ್ಲದಿರುವುದರಿಂದ ಅಂತಿಂಥ ಕಾಯಿ ತೆಗೆದು ಮೂಟೆಗಳಿಗೆ ತುಂಬಲಾಗುತ್ತಿದೆ ಎಂದು ಈರಾಪುರ ಗ್ರಾಮದ ರೈತ ವೆಂಕಟರವಣಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಕ್ಯಾಪ್ಸಿಕಂ ಸ್ಯಾಂಪಲ್ ಸಿಗುವ ಸಂದರ್ಭದಲ್ಲಿ ಹೆಚ್ಚಲ್ಲದಿದ್ದರೂ, ಮಾಡಿದ ಖರ್ಚಾದರೂ ಬರುವ ಭರವಸೆ ಇತ್ತು. ಆದರೆ ಈಗ ಬೆಲೆ ಕುಸಿದಿದೆ. ಬೆಳೆಗೆ ರೂ. 1ಲಕ್ಷ ಖರ್ಚು ಬಂದಿದೆ. ಈಗ ಕೇಳುವವರಿಲ್ಲ. ಉತ್ಪನ್ನವನ್ನು ಏನು ಮಾಡಬೇಕು ಎಂದು ತೋಚದೆ ತೋಟದಲ್ಲಿಯೇ ಬಿಟ್ಟಿದ್ದೇನೆ ಎಂದು ಪಾಳ್ಯ ಗ್ರಾಮದ ರೈತ ಪಿ.ಎಂ.ವೆಂಕಟೇಶರೆಡ್ಡಿ ತಮ್ಮ ಅಳಲು ತೋಡಿಕೊಂಡರು.

ಕ್ಯಾಪ್ಸಿಕಂ ತೀರಾ ಸೂಕ್ಷ್ಮ ಬೆಳೆ. ಅದರ ಬೇಸಾಯ ಸುಲಭವಲ್ಲ. ಉತ್ತಮ ಫಸಲು ಸಿಗಬೇಕಾದರೆ ಉತ್ತಮ ದರ್ಜೆಯ ಸಸಿ ನಾಟಿ ಮಾಡಬೇಕು. ಉತ್ಕೃಷ್ಟ ಗೊಬ್ಬರ ನೀಡಬೇಕು. ಯಾಮಾರದಂತೆ ರೋಗ ನಾಶಕ ಹಾಗೂ ಕೀಟ ನಾಶಕ ಸಿಂಪರಣೆ ಮಾಡಬೇಕು. ಫಂಗಸ್ ಹಾಗೂ ವೈರಾಣು ರೋಗದಿಂದ ರಕ್ಷಣೆ ನೀಡಬೇಕು.

ಈ ಬೆಳೆ ಕೈಗೆ ಬರುವಷ್ಟರಲ್ಲಿ ದೊಡ್ಡ ಮೊತ್ತದ ಹಣ ಕೈಬಿಡುತ್ತದೆ. ಒಳ್ಳೆ ಬೆಲೆ ಸಿಕ್ಕಿದರೆ ಪರವಾಗಿಲ್ಲ. ಬೆಲೆ ಕುಸಿತ ಉಂಟಾದರೆ ದೇವರೇ ಕಾಪಾಡಬೇಕು. ಬಜ್ಜಿ ಮೆಣಸಿನ ಕಾಯಿ ಬೇಸಾಯ ಇದಕ್ಕಿಂತ ಹೆಚ್ಚು ಭಿನ್ನವೇನೂ ಅಲ್ಲ. ಆದರೆ ಈಗ ಬೆಲೆ ಕುಸಿತದಿಂದಾಗಿ ಬೆಳೆಗಾರರಿಗೆ ಸಂಕಷ್ಟ ಬಂದಿದೆ.

ಈರುಳ್ಳಿ ಬೆಲೆ ಒಂದೇ ಸಮನೆ ಏರುತ್ತಿದ್ದರೆ, ಬೆಳ್ಳುಳ್ಳಿ ಬೆಲೆ ಮಾತ್ರ ಪಾತಾಳಕ್ಕೆ ಇಳಿದಿದೆ. ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುವ ಕೊತ್ತಂಬರಿ ಸೊಪ್ಪಿಗೂ ಹೇಳಿಕೊಳ್ಳುವಂಥ ಬೆಲೆ ಇಲ್ಲ. ಕಳೆದ ವಾರ ತೀರ ಕುಸಿದಿದ್ದ ಬೆಲೆ ಈಗ ಚೇತರಿಸಕೊಳ್ಳುತ್ತಿದೆ.

ಅವರೆ ಕಾಯಿ ಕಾಲ ಬಂದರೆ ಸಹಜವಾಗಿಯೇ ಎಲ್ಲ ತರಕಾರಿಗಳ ಬೆಲೆಯಲ್ಲಿ ಕುಸಿತ ಕಂಡುಬರುತ್ತದೆ. ಇದಕ್ಕೆ ಕಾರಣ ಜನ ತರಕಾರಿಗಿಂತ ವರ್ಷದಲ್ಲಿ ಕೆಲವೇ ದಿನಗಳ ಕಾಲ ದೊರೆಯುವ ಅವರೆ ಕಾಯಿ ಖರೀದಿಗೆ ಮುಗಿಬೀಳುವುದೇ ಆಗಿದೆ. ಅವರೆ ಕಾಯಿ ಮಾರುಕಟ್ಟೆಗೆ ಬರುವ ಮುನ್ನ ತೊಗರಿ ಕಾಯಿಗೆ ಉತ್ತಮ ಬೆಲೆ ಇತ್ತು. ಈಗ ಅದರ ಬೆಲೆಯು ಕಡಿಮೆಯಾಗಿದೆ.

ಇಷ್ಟರ ನಡುವೆಯೂ ಸೊಪ್ಪಿನ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಹಿಡಿ ಗಾತ್ರದ ಕಟ್ಟೊಂದು ರೂ. 10 ರಿಂದ 15ರವರೆಗೆ ಮಾರಾಟವಾಗುತ್ತಿದೆ.
ವಿಚಿತ್ರವೆಂದರೆ ಸಗಟು ಬೆಲೆಗಳಲ್ಲಿ ಕುಸಿತ ಉಂಟಾದರೂ, ಚಿಲ್ಲರೆ ಬೆಲೆಗಳಲ್ಲಿ ಹೆಚ್ಚು ವ್ಯತ್ಯಾಸ ಕಂಡುಬರುವುದಿಲ್ಲ. ಇದಕ್ಕೆ ಕಾರಣ ಮಾರುಕಟ್ಟೆ ಹಾಗೂ ಸಂತೆಗಳಲ್ಲಿ ತರಕಾರಿ ಮಾರಾಟ ಮಾಡುವ ಮಂದಿ ಸಂಘಟಿತರಾಗಿರುವುದು. ಅವರು ಒಂದೇ ಬೆಲೆ ಇಡುವುದರಿಂದ ಗ್ರಾಹಕರಿಗೆ ಇಳಿದ ಬೆಲೆಯ ಲಾಭ ಸಿಗುತ್ತಿಲ್ಲ. ಇದು ವಿಪರ್ಯಾಸವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.