ADVERTISEMENT

ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 12:28 IST
Last Updated 2 ಏಪ್ರಿಲ್ 2018, 12:28 IST

ಮುಳಬಾಗಿಲು: ತಾಲ್ಲೂಕಿನಾದ್ಯಂತ ಇತ್ತೀಚಿಗೆ ಬಿದ್ದ ಆಲಿಕಲ್ಲು ಮಳೆಗೆ ಬೆಳೆ ಹಾನಿಯಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶನಿವಾರ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ ಅವರಿಗೆ ಮನವಿ ಸಲ್ಲಿಸಿದರು. ‘ಬರದ ಪರಿಸ್ಥಿತಿಯಲ್ಲೂ ಲಭ್ಯವಿರುವ ನೀರಿಗೆ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಬಹುತೇಕ ಮಂದಿಯ ಬೆಳೆಗಳು ಕೊಯ್ಲಿಗೆ ಬಂದಿದ್ದವು. ಇಂತಹ ಸಂದರ್ಭದಲ್ಲಿ ಅಕಾಲಿಕ ಮಳೆಯಾಗಿ ಬೆಳೆಗಳು ನೆಲಕಚ್ಚಿವೆ. ಅಧಿಕಾರಿಗಳು ಸಮೀಕ್ಷೆ ನಡೆಸಿ ಶೀಘ್ರದಲ್ಲೇ ಪರಿಹಾರ ಕಲ್ಪಿಸಿಕೊಡಬೇಕು’ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.

‘ಟೊಮೆಟೊ, ಆಲೂಗಡ್ಡೆ, ಡೊಣ್ಣ ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ಬೀನ್ಸ್ ಬೆಳೆಗಳು ಹಾನಿಯಾಗಿವೆ. ಕೆಲ ರೈತರು ಬೆಳೆಗಳ ಮೇಲೆ ವಿಮೆ ಮಾಡಿಸಿದ್ದು, ಆದ್ಯತೆ ಮೇರೆಗೆ ವಿಮಾ ಹಣ ಪಾವತಿ ಮಾಡಬೇಕು. ಹಿಂದೆ ವಿಮಾ ಹಣ ಪಾವತಿ ಮಾಡಿಕೊಂಡ ಕಂಪನಿಗಳು ಪರಿಹಾರ ಕಲ್ಪಿಸದೆ ರೈತರನ್ನು ವಂಚಿಸಿವೆ. ಆಗಿರುವ ನಷ್ಟಕ್ಕೆ ಸರಿಸಮಾನಾಗಿ ಕೂಡಲೇ ಪರಿಹಾರ ನೀಡಬೇಕು’ ಎಂದರು. ‘ಬೆಳೆ ನಾಟಿ ಮಾಡುವುದರಿಂದ ಹಿಡಿದು ಕೊಯ್ಲು ಮಾಡುವ ತನಕ ಲಕ್ಷಾಂತರರೂ ಖರ್ಚು ಬರುತ್ತದೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಅಧಿಕಾರಿಗಳನ್ನು ಕೇಳಲು ಹೋದರೆ ಚುನಾವಣೆ ಕಾರ್ಯ ಒತ್ತಡದಲ್ಲಿದ್ದೇವೆ ಎಂದು ಸಬೂಬು ಹೇಳುತ್ತಾರೆ. ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ಮತದಾನ ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್, ರೈತ ಸಂಘದ ಪದಾಧಿಕಾರಿಗಳಾದ ವಿಜಯ್, ದೇವರಾಜ್, ಶ್ರೀನಿವಾಸ್, ನಾಗರಾಜ್, ಅಹಮದ್‌ಪಾಷಾ, ಸಾಗರ್, ರಂಜಿತ್ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.