ADVERTISEMENT

ಬೇಂದ್ರೆ ಕಾವ್ಯದಲ್ಲಿ ಬದುಕಿನ ಸತ್ವವಿದೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 7:30 IST
Last Updated 4 ಜನವರಿ 2011, 7:30 IST

ಶ್ರೀನಿವಾಸಪುರ: ವರ ಕವಿ ಬೇಂದ್ರೆ ಅವರು ತಮ್ಮ ಕಾವ್ಯದಲ್ಲಿ ಬದುಕಿನ ಜೀವ ಸತ್ವವನ್ನು ಹಿಡಿದಿಟ್ಟಿದ್ದಾರೆ. ನುಡಿ ಗಾರುಡಿಗ ಎಂಬ ಮಾತಿಗೆ ತಕ್ಕಂತೆ ಭಾಷೆಯನ್ನು ತಮ್ಮ ಭಾವಕ್ಕೆ ಒಗ್ಗಿಸಿಕೊಂಡು ಕಾವ್ಯ ರಚನೆ ಮಾಡಿದ್ದಾರೆ ಎಂದು ಶಿಕ್ಷಣ ತಜ್ಞ ಎಂ.ಶ್ರೀರಾಮರೆಡ್ಡಿ ತಿಳಿಸಿದರು. ತಾಲ್ಲೂಕಿನ ಬೈರಪ್ಪಲ್ಲಿ ಸಮೀಪದ ಭೈರವೇಶ್ವರ ವಿದ್ಯಾನಿಕೇತನ ರಂಗ ಮಂದಿರದಲ್ಲಿ ಧಾರವಾಡದ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಸ್ಥಳೀಯ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ವರಕವಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಂದ್ರೆ ಅವರ ಸಾಹಿತ್ಯ ಲೋಕ ದೊಡ್ಡದು. ಅವರ ಭಾವ ಕೋಶ ವಿಶಾಲವಾದುದು. ಬೇಂದ್ರೆ ಅವರಂತಹ ಕವಿ ಯಾವುದೇ ಭಾಷೆಗೆ ಭೂಷಣ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ  ಸಂಪನ್ಮೂಲ ವ್ಯಕ್ತಿ ಎ.ವೆಂಕಟರೆಡ್ಡಿ ಮಾತನಾಡಿ, ಬೇಂದ್ರೆ ಟ್ರಸ್ಟ್ ರಾಜ್ಯದ ಗಡಿಯ ವರೆಗೆ ತನ್ನ ಕಾರ್ಯವನ್ನು ವಿಸ್ತರಿಸಿರುವುದು ಸ್ವಾಗತಾರ್ಹ. ಅನ್ಯ ಭಾಷೆಯ ಪ್ರಭಾವ ಹೆಚ್ಚಾಗಿರುವ ಗಡಿ ಪ್ರದೇಶದಲ್ಲಿ ನುಡಿ ಗಾರುಡಿಗ ಬೇಂದ್ರೆ ಅವರ ಕಾವ್ಯ ಮಾಧುರ್ಯ ಪಸರಿಸುತ್ತಿದೆ. ಬೇಂದ್ರೆ ಅವರ ಕವಿತೆಗಳನ್ನು ಹಾಡುವುದೆಂದರೆ ಗಾಯಕರಿಗೆ ಎಲ್ಲೆ ಮೀರಿದ ಉತ್ಸಾಹ. ಕವಿತೆಗಳ ಗೇಯತೆ ಕೇಳುಗರ ಮನಸ್ಸನ್ನು ಅರಳಿಸುತ್ತದೆ ಎಂದು ಹೇಳಿದರು.

  ಪ್ರೊ. ಎಸ್.ಮುನಿರೆಡ್ಡಿ, ಸಾಹಿತಿ ಸ.ರಘುನಾಥ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾ.ವೆಂಕೋಬರಾವ್, ಜಾನಪದ ಸಂಶೋಧಕ ದೇವಲಪಲ್ಲಿ ಜಿ.ಶ್ರೀನಿವಾಸಯ್ಯ, ಭವಾನಿ ಶಂಕರ್, ಉಪನ್ಯಾಸಕ ರಾಮಕೃಷ್ಣಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರೇಮಾರೆಡ್ಡಿ ಸ್ವಾಗತಿಸಿ, ಶ್ರೀನಿವಾಸರೆಡ್ಡಿ ವಂದಿಸಿದರು.                                                                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.