ಕೋಲಾರ: ಏಪ್ರಿಲ್ ಕೊನೆ ವಾರದಲ್ಲಿ ಶುರುವಾದ ಭರಣಿ ಮಳೆ ತಂಪೆರೆದು, ಕಾವು ಕಳೆದು, ಜಿಲ್ಲೆಯ ಒಣಭೂಮಿ ಕೃಷಿಗೆ ಆರಂಭಿಕ ಸೂಚನೆ ನೀಡಿದೆ. ಜಿಲ್ಲೆಯ ಅಲ್ಲಲ್ಲಿ ಆಗಾಗ ನಾಲ್ಕು ಹನಿ ಬಿದ್ದರೂ ರೈತರಲ್ಲಿ ಸಂತಸ ತಂದಿದೆ.
‘ಭರಣಿ ಮಳೆ ಬಂದರೆ ಧರಣಿ ಬೆಳೆದಂಗೆ’ ಎಂಬ ನಾಣ್ಣುಡಿಯನ್ನು ರೈತರು ಖುಷಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಭರಣಿ ಮಳೆ ಬರದಿದ್ದರೆ ಕಷ್ಟ ಎದುರಾಗುತ್ತದೆ ಎಂಬ ಆತಂಕ ಈಗಿಲ್ಲ.ಸೋಮವಾರ ಸಂಜೆಯೂ ತಾಲ್ಲೂಕಿನಲ್ಲಿ ಭರಣಿ ಮಳೆ ಸುರಿದಿದೆ.
ಇದೇ ಮೇ 10ರವರೆಗೂ ಭರಣಿ ಮಳೆ ಕಾಲ. ಯಥಾಪ್ರಕಾರ ಏಪ್ರಿಲ್-ಮೇ ತಿಂಗಳು ಕೃಷಿ ಚಟುವಟಿಕೆಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳುವ ಕೆಲಸವೂ ಶುರುವಾಗಿದೆ. ಬಿತ್ತನೆಗೆ ಮುಂಚೆ ನೆಲವನ್ನು ಉತ್ತು ಹದ ಮಾಡುವ ದೃಶ್ಯಗಳು ಜಿಲ್ಲೆಯ ಅಲ್ಲಲ್ಲಿ ನಿತ್ಯವೂ ಕಾಣುತ್ತಿವೆ.
ಜೋಡೆತ್ತು ಕಡಿಮೆ: ಉಳುವ ಕಾಯಕಕ್ಕೆ ರೈತರ ಜೊತೆಗೆ ಹೆಗಲೊಡ್ಡುತ್ತಿದ್ದ ಜೋಡೆತ್ತುಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಇಳಿಮುಖವಾಗಿರುವುದು ಗಮನಾರ್ಹ. ಎತ್ತುಗಳನ್ನು ಸಾಕಿ-ಸಲಹುವವರೂ ಕಡಿಮೆಯಾಗಿದ್ದಾರೆ.
ಹೀಗಾಗಿ ಹಲವೆಡೆ ಹೊಲಗಳನ್ನು ಟ್ರ್ಯಾಕ್ಟರ್ ನೇಗಿಲಿನಿಂದ ಉಳುವ ದೃಶ್ಯಗಳೂ ಸಾಮಾನ್ಯ. ಹಗಲಿಡೀ ರೈತನೊಬ್ಬ ಜೋಡೆತ್ತುಗಳೊಡನೆ ಉಳುವ ಕೆಲಸವನ್ನು ಟ್ರ್ಯಾಕ್ಟರ್ ನೇಗಿಲುಗಳು ಕೆಲವೇ ಗಂಟೆಗಳಲ್ಲಿ ಮಾಡಿ ಮುಗಿಸುತ್ತವೆ. ಉಳುವ ಸುಲಭದ ದಾರಿಗೆ ರೈತರು ಮನಸೋತಿದ್ದಾರೆ. ಹೀಗಾಗಿ ಎತ್ತುಗಳು ಕಣ್ಮರೆಯಾಗುತ್ತಿವೆ.
ಉಳುಮೆಯ ಜೊತೆಗೆ ಜಮೀನಿಗೆ ಗೊಬ್ಬರ ಹೊಡೆಯುವ (ಮಿಶ್ರಣ ಮಾಡುವ) ಸಿದ್ಧತೆಗಳೂ ನಡೆದಿವೆ. ಜಮೀನಲ್ಲದೆ ಸಾಕಷ್ಟು ಸ್ಥಳಾವಕಾಶವುಳ್ಳವರು ತಿಪ್ಪೆಗೊಬ್ಬರಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಹೊಲಗಳಿಗೆ ಸಾಗಿಸಿದರೆ, ಸ್ಥಳಾವಕಾಶವಿಲ್ಲದವರು, ಜಮೀನಿನಲ್ಲೆ ಗೊಬ್ಬರವನ್ನು ಸಂಗ್ರಹಿಸಿ ನಂತರ ಅಲ್ಲಿಯೇ ಹರಡುತ್ತಾರೆ. ಎರಡೂ ಬಗೆಯ ಪದ್ಧತಿಗಳೂ ಜಿಲ್ಲೆಯಲ್ಲಿ ಜಾರಿಯಲ್ಲಿವೆ. ಬೀಜಗಳಿಗೆ ಇತರರನ್ನು, ಕೃಷಿ ಇಲಾಖೆಯನ್ನು ಅವಲಂಭಿಸದ ಹಲವು ರೈತರು ತಾವು ಸಂಗ್ರಹಿಸಿರುವ ಬೀಜಗಳನ್ನೆ ಬಿತ್ತಲು ಸಿದ್ಧರಾಗಿದ್ದಾರೆ. ಇಲ್ಲದವರು ಬೀಜಗಳಿಗೆ ಕಾಯುತ್ತಿದ್ದಾರೆ.
10 ಸಾವಿರ ಕ್ವಿಂಟಾಲ್: ‘ಈ ಬಾರಿ ಜಿಲ್ಲೆಯಲ್ಲಿ 10 ಸಾವಿರ ಕ್ವಿಂಟಾಲ್ ಬೀಜಕ್ಕಾಗಿ ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ಕರ್ನಾಟಕ ಎಣ್ಣೆಕಾಳು ಬೀಜ ಫೆಡರೇಶನ್‌ಗೆ ಬೇಡಿಕೆ ಸಲ್ಲಿಸಲಾಗಿದೆ. ಕಳೆದ ವರ್ಷಗಳಲ್ಲಿ 8 ಸಾವಿರ ಕ್ವಿಂಟಾಲ್ ಬೀಜಕ್ಕೆ ಬೇಡಿಕೆ ಇತ್ತು. ಈ ಬಾರಿ 2 ಸಾವಿರ ಕ್ವಿಂಟಾಲ್‌ನಷ್ಟು ಬೇಡಿಕೆ ಹೆಚ್ಚಿದೆ.ಪ್ರಮುಖವಾಗಿ ಭತ್ತ, ರಾಗಿ, ತೊಗರಿ, ನೆಲಗಡಲೆ, ಅಲಸಂದೆ ಬೀಜಗಳಿಗೆ ಬೇಡಿಕೆ ಹೆಚ್ಚು’ ಎಂಬುದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಿಕ್ಕಣ್ಣನವರ ನುಡಿ.
‘ಜಿಲ್ಲೆಯಲ್ಲಿ ಸಾಧಾರಣವಾಗಿ ತೋಟದ ಬೆಳೆಗಳ ಕಡೆಗೆ ಆಸಕ್ತಿ ತೋರುವ ರೈತರೇ ಹೆಚ್ಚು. ಒಣಭೂಮಿಯಲ್ಲಿ ಬಹುತೇಕ ರೈತರು ಜುಲೈ ತಿಂಗಳಲ್ಲೆ ಬಿತ್ತನೆ ಮಾಡುತ್ತಾರೆ. ಅಶ್ವಿನಿ ಮಳೆಯೂ ಉತ್ತಮವಾಗಿ ಸುರಿದಿದೆ.ಭರಣಿ ಮಳೆಯೂ ಜಿಲ್ಲೆಯ ಅಲ್ಲಲ್ಲಿ ಸುರಿದು ಆಶಾವಾದ ಮೂಡಿದೆ. ಮೃಗಶಿರ ಮಳೆಯ ಬಳಿಕ ಉಳುಮೆ ಕಾರ್ಯ ವೇಗ ಪಡೆಯುತ್ತದೆ. ಮುಂದಿನ ವಾರದಿಂದ ಉಳುಮೆ ಅಂಕಿ-ಅಂಶವನ್ನು ಸಂಗ್ರಹಿಸಲಾಗುವುದು’ ಎಂದು ಅವರು ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.
ತೃಣಧಾನ್ಯ: ರೈತರು ತೃಣಧಾನ್ಯ ಬೆಳೆಯುವ ಕಡೆಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಸಾಸಿವೆ, ಅರ್ಕಾ, ನವಣೆ, ಸಾಮೆ, ಅರಳೆ ಸೇರಿದಂತೆ ಹಲವು ತೃಣಧಾನ್ಯಗಳ ಸಂತತಿ ನಶಿಸುತ್ತಿದೆ. ನೆಲಗಡಲೆಯೂ ಸೇರಿದಂತೆ ಎಣ್ಣೆಕಾಳುಗಳನ್ನು ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೊಲಗಳ ಬದುಗಳ ಮೇಲೆ ತೃಣಧಾನ್ಯಗಳನ್ನು ಬಹುತೇಕ ರೈತರು ಬೆಳೆಯುತ್ತಿದ್ದರು. ಆ ಸಂಪ್ರದಾಯವನ್ನು ಮತ್ತೆ ಮುಂದುವರಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಗೆದ್ದ ತೊಗರಿ: ಕಳೆದ ಬಾರಿ ತೊಗರಿ ಬೆಳೆದ ರೈತರಿಗೆ ಹೆಚ್ಚು ಲಾಭವಾಗಿದೆ. ಹಸಿ ತೊಗರಿಗೆ ಬೇಡಿಕೆ ಹೆಚ್ಚಿದ್ದರಿಂದ ಬಹಳ ರೈತರು ತೊಗರಿ ಬೆಳೆದಿದ್ದರು. ಈ ಬಾರಿಯೂ ಹೆಚ್ಚಿನ ಕ್ಷೇತ್ರದಲ್ಲಿ ತೊಗರಿ ಬೆಳೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.