ADVERTISEMENT

ಭುಜದ ಮೇಲೆ ಹೊತ್ತು ಸಂಭ್ರಮಿಸಿದರು

​ಪ್ರಜಾವಾಣಿ ವಾರ್ತೆ
Published 16 ಮೇ 2018, 13:02 IST
Last Updated 16 ಮೇ 2018, 13:02 IST

ಬಂಗಾರಪೇಟೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ನಾರಾಯಣಸ್ವಾಮಿ ಜಯ ಗಳಿಸಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು.

ಕೋಲಾರದ ಮತ ಎಣಿಕೆ ಕೇಂದ್ರದಿಂದ ಬಂಗಾರಪೇಟೆಗೆ ಬರುತ್ತಿದ್ದ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಬೆಂಬಲಿಗರು ತಾಲ್ಲೂಕಿನ ಗಡಿ ಹುದುಕುಳದಿಂದ ತೆರೆದ ಜೀಪಿನಲ್ಲಿ ಕೂರಿಸಿ ಮೆರವಣಿಗೆ ನಡೆಸಿದರು.

ಅಲ್ಲದೆ ರಸ್ತೆ ಉದ್ದಕ್ಕೂ ಪ್ರತಿ ಗ್ರಾಮದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಖುಷಿಪಟ್ಟರು. ರಸ್ತೆ ಉದ್ದಕ್ಕೂ ಅವರ ಮೇಲೆ ಹೂವು ಚೆಲ್ಲಿದರು. ಅಲ್ಲದೆ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ವಿಜಯೋತ್ಸವ ನಡೆಸಿದರು.

ADVERTISEMENT

ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಜೀಪಿನಿಂದ ಕೆಳಗೆ ಇಳಿಸಿದ ಬೆಂಬಲಿಗರು ಅವರನ್ನು ಭುಜದ ಮೇಲೆ ಎತ್ತಿಕೊಂಡು ಮೆರವಣಿಗೆ ನಡೆಸಿದರು. ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿದರು.

ನೂರಾರು ಕಾರ್ಯಕರ್ತರು, ಮುಖಂಡರು ಬೈಕ್ ಮತ್ತು ಕಾರುಗಳಲ್ಲಿ ಮೆರವಣಿಗೆಗೆ ಸಾತ್ ನೀಡಿದರು. ಪಟ್ಟಣದ ಕುವೆಂಪು ವೃತ್ತದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಎಸ್.ಎನ್.ನಾರಾಯಣಸ್ವಾಮಿ ಅವರು, ಮೊದಲಿಗೆ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಆರಂಭವಾಗಲಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದು, ಎರಡನೆ ಅವದಿಗೂ ಮುಂದುವರೆಸುತ್ತೇನೆ ಎಂದರು.

ಯಾರೇ ಮತ ಹಾಕಿರಲಿ, ಹಾಕದಿರಲಿ ಎಲ್ಲ ಸಮುದಾಯ ಮತ್ತು ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜಾತಿ, ಮತಕ್ಕೆ ಮನ್ನಣೆ ನೀಡದೆ ಎಲ್ಲರನ್ನೂ ಒಗ್ಗೂಡಿಸಿ ಕ್ಷೇತ್ರಕ್ಕೆ ದುಡಿಯುವೆ ಎಂದರು.

ಕಷ್ಟದಲ್ಲಿ ಇದ್ದ ಸಂದರ್ಭ ಕ್ಷೇತ್ರದ ಜನರು ನನ್ನನ್ನು ಮೇಲಿತ್ತಿದ್ದಾರೆ. ಕ್ಷೇತ್ರದ ಎಲ್ಲ ಹೋಬಳಿಗೂ ತೆರಳಿ ಜನರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು. ಜಿಲ್ಲಾ ಘಟಕ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮುಖಂಡರು ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.