ADVERTISEMENT

ಮಳೆ: ತುಂಬಿ ಹರಿದ ಕೆರೆ ಕೋಡಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 7:02 IST
Last Updated 6 ಅಕ್ಟೋಬರ್ 2017, 7:02 IST

ಕೆಜಿಎಫ್: ನಗರದ ಸುತ್ತಮುತ್ತ ಗುರುವಾರ ಬಿದ್ದ ಭಾರಿ ಮಳೆಯಿಂದಾಗಿ ಅನೇಕ ಕೆರೆಗಳು ಕೋಡಿ ಹೋಗಿದ್ದು, ಬೇತಮಂಗಲ ಜಲಾಶಯ ಭರ್ತಿಯಾಗುವ ಎಲ್ಲ ಸೂಚನೆಗಳು ಕಾಣುತ್ತಿವೆ. ಕೆಜಿಎಫ್ ನಗರ, ಬೆಮಲ್‌ ಮತ್ತು ಬೇತಮಂಗಲಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬೇತಮಂಗಲ ಜಲಾಶಯ ಬತ್ತಿ ಹೋಗಿದ್ದರಿಂದ ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ನೀರಿನ ಹಾಹಾಕಾರ ಉಂಟಾಗಿತ್ತು. ಸಿಹಿ ನೀರಿಗೆ ಹೆಸರಾದ ಜಲಾಶಯದ ನೀರು ನಗರಕ್ಕೆ ಮುಂದಿನ ಇಪ್ಪತ್ತು ದಿನಗಳಲ್ಲಿ ಸಿಗಲಿದೆ.

ಬೇತಮಂಗಲ ಜಲಾಶಯಕ್ಕೆ ನೀರು ಸರಬರಾಜು ಆಗುವ ಕಳ್ಳಿಕುಪ್ಪ, ಹೊಳಲಿ, ನಲ್ಲೂರು ಕೆರೆಗಳು ಭರ್ತಿಯಾಗಿ ಕೋಡಿ ಹೋಗಿವೆ. ಜಲಾಶಯಕ್ಕೆ ಚಿಕ್ಕ ಏಟಿ ಮತ್ತು ದೊಡ್ಡ ಏಟಿ ಮೂಲಕ ನೀರು ಹರಿದುಬರುತ್ತಿದೆ. ಜಲಾಶಯದ ತುಂಬ ಬೆಳೆದಿದ್ದ ಜಾಲಿ ಮತ್ತು ವಿಷಯುಕ್ತ ಗಿಡಗಳು ನೀರಿನಲ್ಲಿ ಮುಳುಗಿದೆ. ಅಂಕತಟ್ಟಹಳ್ಳಿ ಬಳಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡಲಾಗಿದ್ದ ಜಮೀನನ್ನು ನೀರು ಆಕ್ರಮಿಸಿಕೊಳ್ಳುತ್ತಿದೆ.

ಜಲಾಶಯಕ್ಕೆ ನೀರು ಬರುತ್ತಿರುವ ವಿಷಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಮಾತಾಗಿದ್ದು, ಜಿಟಿಜಿಟಿ ಬೀಳುತ್ತಿರುವ ಮಳೆಯಲ್ಲಿಯೇ ನೂರಾರು ಜನ ಕೆರೆಗೆ ಭೇಟಿ ನೀಡಿ ನೀರಿನ ಮಟ್ಟ ಎತ್ತರವಾಗುತ್ತಿರುವುದನ್ನು ಕಾಣುತ್ತಿದ್ದಾರೆ. ಸಾಮಾಜಿಕ ಜಾಲಗಳ ಮೂಲಕ ಫೋಟೊಗಳನ್ನುಹಾಕಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.

ADVERTISEMENT

2005ನೇ ಇಸವಿ ನಂತರ ಇದೇ ಮೊದಲ ಬಾರಿಗೆ ಜಲಾಶಯಕ್ಕೆ ಇಷ್ಟು ಪ್ರಮಾಣದ ನೀರು ಬಂದಿದ್ದು, ಜಲಮಂಡಳಿ ಈಗಾಗಲೇ ನೀರು ಸಂಗ್ರಹಣಾಲಯ ಮತ್ತು ಶುದ್ಧೀಕರಣ ಕೇಂದ್ರಗಳಲ್ಲಿ ನೀರು ಸರಬರಾಜಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಜಲಾಶಯದಲ್ಲಿ ನೀರು ಭರ್ತಿಯಾದರೆ ಒಂದೊಂದೇ ಗೇಟನ್ನು ತೆರೆಯಲಾಗುವುದು. 35 ಗೇಟ್‌ಗಳನ್ನು ಅಗತ್ಯ ನೋಡಿಕೊಂಡು ತೆರೆಯಲಾಗುವುದು ಎಂದು ಜಲಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವೀಂದ್ರ ತಿಳಿಸಿದ್ದಾರೆ.ಕೆಜಿಎಫ್ ನಗರಕ್ಕೆ ನೀರು ಸರಬರಾಜು ತಯಾರಿಯನ್ನು ಮಾಡಲಾಗುವುದು. ಮುಂದಿನ ಇಪ್ಪತ್ತು ದಿನಗಳೊಳಗೆ ನೀರು ಸರಬರಾಜು ಮಾಡುವ ಸಂಭವ ಇದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.