ಮಾಲೂರು: ಇದೀಗ ಎಲ್ಲೆಡೆ `ಚೈತ್ರ~ದ ಸೊಬಗು. ಮರ-ಗಿಡ ಚಿಗುರೊಡೆದು ಹೂವು ಅರಳಿ ನಿಂತು ನಗುತ್ತಿವೆ. ಜನರು ಜಾತ್ರೆ-ಊರಬ್ಬಗಳ ಸಂಭ್ರಮದಲ್ಲಿದ್ದಾರೆ.
ಪಟ್ಟಣದ ಧರ್ಮರಾಯಸ್ವಾಮಿ ಕರಗ ಮಹೋತ್ಸವ ಹಾಗೂ ಪಟಾಲಮ್ಮ ಮುತ್ಯಾಲಮ್ಮ ದೇವಿ ಜಾತ್ರೆ ವೈಭವದಿಂದ ಜರುಗಲಿದೆ. ಏ.11ರ ಬುಧವಾರ ಧ್ವಜಾರೋಹಣದಿಂದ ಆರಂಭಗೊಂಡು ಏಳು ದಿನ ನಡೆಯುವ ಕರಗೋತ್ಸವದ ಆಚರಣೆ ರಾತ್ರಿ ನಡೆಯುತ್ತವೆ.
ಉತ್ಸವಕ್ಕೆ ಧ್ವಜಾರೋಹಣದೊಂದಿಗೆ ವಿಧ್ಯುಕ್ತ ಚಾಲನೆ ಸಿಗುತ್ತದೆ. ಹಸಿ ಕರಗ, ಆರತಿ ಉತ್ಸವ, ಸಿಡಿ ಜಾತ್ರೆ, ಕರಗದ ಶಕ್ತ್ಯೋತ್ಸವ ಹಾಗೂ ವಸಂತೋತ್ಸವ ಆಚರಣೆ ನಡೆಯುತ್ತವೆ. ಧರ್ಮರಾಯ ಸ್ವಾಮಿ ಕರಗೋತ್ಸವ ಬೆಂಗಳೂರು ಸೇರಿದಂತೆ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. ಆಧುನಿಕತೆಯಲ್ಲೂ `ಕರಗ~ ಎಳ್ಳಷ್ಟು ಬದಲಾಗಿಲ್ಲ.
ಹಿಂದಿನಿಂದಲೂ ಈ ಉತ್ಸವವನ್ನು ವಹ್ನಿಕುಲಸ್ಥರು ಈ ನೆಲ ಮೂಲದ ಹಬ್ಬವೆಂಬತ್ತೆ ನಿಯಮ ನಿಷ್ಠೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಸಾಮರಸ್ಯದ ಆಚರಣೆ: ಕರಗೋತ್ಸವ ಮಸೀದಿಗೆ ಹೋಗಿ ಬರುವುದು ಮತೀಯ ಸಾಮರಸ್ಯದ ಸಂಕೇತ. ಜಾತಿ-ಭೇದ ತೊರೆದು ಎಲ್ಲ ಸಮುದಾಯಗಳ ಜನತೆ ಭಾಗವಹಿಸುವ ಕರಗ ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿದೆ. ಧ್ವಜಾರೋಹಣದಿಂದಲೇ ಹರಿಶಿಣ ಬಣ್ಣದ ಉಡುಗೆ ಧರಿಸಿದ ವೀರಕುಮಾರರು ವ್ರತ ಆರಂಭಿಸುತ್ತಾರೆ.
ಉತ್ಸವದ ಉದ್ದಕ್ಕೂ ಕರಗ ಶಕ್ತಿಯ ರಕ್ಷಕರು ಅವರೇ ಆಗಿರುತ್ತಾರೆ. ಖಡ್ಗಧಾರಿ ವೀರಕುಮಾರರ ಅಲಗು ಸೇವೆ ಕರಗೋತ್ಸವದ ಮುಖ್ಯ ಆಚರಣೆ.
ಏಳು ದಿನದ ಉತ್ಸವದಲ್ಲಿ ಹೂವಿನ ಕರಗ ಉತ್ಸವ ಪ್ರಮುಖವಾದದು. ಕರಗ ಹೊರುವ ಪೂಜಾರಿ ಸ್ತ್ರೀವೇಷ ಧರಿಸಿ ಕಪ್ಪು ಬಳೆ ತೊಟ್ಟು, ಹರಿಶಿಣ ಬಣ್ಣದ ಸೀರೆಯನ್ನುಟ್ಟು ದ್ರೌಪದಿಯಂತೆ ಸಿಂಗಾರಗೊಂಡು, ಕೈಯಲ್ಲಿ ಬೆತ್ತ ಹಾಗೂ ಪುಟ್ಟ ಕತ್ತಿ ಹಿಡಿದಿರುತ್ತಾರೆ. ಕರಗ ಸೂಸುವ ಮಲ್ಲಿಗೆಯ ಪರಿಮಳ ಜನರನ್ನು ಮಂತ್ರ ಮುಗ್ಧರಾಗಿಸುತ್ತದೆ. ಮಲ್ಲಿಗೆ ಹೂವಿನ ಅಲಂಕಾರ, ಕನಕಾಂಬರ ಹೂವಿನ ಎಳಸುಗಳು ಮೇಲ್ತುದಿಯಲ್ಲಿ ಬೆಳ್ಳಿ ಛತ್ರಿ ನೋಡಲು ಆಕರ್ಷಕವಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.