ADVERTISEMENT

ಮಾಲೂರು: ಬಿಜೆಪಿ-ಜೆಡಿಎಸ್ ಸಮಬಲ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:18 IST
Last Updated 13 ಡಿಸೆಂಬರ್ 2012, 10:18 IST

ಮಾಲೂರು: ತಾಲ್ಲೂಕಿನ ಎಂಟು ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-4, ಜೆಡಿಎಸ್ ಬೆಂಬಲಿತರು ನಾಲ್ಕು ಪಂಚಾಯಿತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಸಮಬಲ ಸಾಧಿಸಿವೆ.

ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ನಿಗದಿಪಡಿಸಿದ ನಂತರ ಬುಧವಾರ ಮೊದಲ ಹಂತದಲ್ಲಿ 8 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ತಾಲ್ಲೂಕಿನಲ್ಲಿ ಪ್ರಬಲ ಎದುರಾಳಿ ಪಕ್ಷಗಳಾಗಿರುವ ಜೆಡಿಎಸ್-ಬಿಜೆಪಿ ತಲಾ 4 ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿದರೆ ಕಾಂಗ್ರಸ್ ಸಾಧನೆ ಶೂನ್ಯವಾಗಿದೆ.

ತೊರ‌್ನಹಳ್ಳಿ: ತಾಲ್ಲೂಕಿನ ತೊರ‌್ನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರಾಮಕೃಷ್ಣಪ್ಪ, ಜೆಡಿಎಸ್ ಬೆಂಬಲಿತ ಕೆ.ಮುನಿಸ್ವಾಮಪ್ಪ ನಾಮಪತ್ರ ಸಲ್ಲಿಸಿದ್ದರು.
15 ಸದಸ್ಯರ ಬಲ ಹೊಂದಿರುವ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ತಲಾ 7 ಮತ ಚಲಾವಣೆಗೊಂಡು ಒಂದು ಮತ ತಿರಸ್ಕೃತವಾಯಿತು.

ಇಬ್ಬರೂ ಸ್ಪರ್ಧಿಗಳು ಸಮಬಲ ಸಾಧಿಸಿದ್ದರಿಂದ ಚುನಾವಣಾಧಿಕಾರಿ ಶ್ರೀನಿವಾಸಮೂರ್ತಿ ಲಾಟರಿ ಎತ್ತಿದರು. ಲಾಟರಿಯಲ್ಲಿ ಕೆ.ಮುನಿಸ್ವಾಮಪ್ಪ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಆನಂದ್ 9 ಮತ, ಬಿಜೆಪಿ ಬೆಂಬಲಿತ ನಾಗರಾಜ್ 6ಮತ ಪಡೆದುಕೊಂಡು ಸೋಲನ್ನು ಅನುಭವಿಸಿದರು. ಬಿಜೆಪಿ ವಶದಲ್ಲಿದ್ದ ಗ್ರಾಮ ಪಂಚಾಯಿತಿ ಜೆಡಿಎಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ದೊಡ್ಡಶಿವಾರ: ಅಧ್ಯಕ್ಷ ಸ್ಥಾನಕ್ಕೆ ಆಂಜಿನಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಸಿ.ಸುನಂದಮ್ಮ ನಾಮಪತ್ರ ಸಲ್ಲಿಸಿದ್ದರು. ಉಳಿದಂತೆ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಇಬ್ಬರನ್ನು ಅವಿರೋಧವಾಗಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಚುನಾವಣಾಧಿಕಾರಿ ಬಿಇಒ ವೆಂಕಟರಾಮರೆಡ್ಡಿ ಘೋಷಿಸಿದರು.

ಟೇಕಲ್: ತಾಲ್ಲೂಕಿನ ಟೇಕಲ್ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮಂಜುಳಾ, ಅನಿತಾ ನಡುವೆ ಚುನಾವಣೆ ನಡೆದು ಮಂಜುಳಾ 7ಮತ ಪಡೆದು ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮುನಿಯಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಸಿಡಿಪಿಒ ವೆಂಕಟೇಶರೆಡ್ಡಿ ಘೋಷಿಸಿದರು.

ಕೊಂಡಶೆಟ್ಟಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮಸೂದಾ ಪರ್ವಿನ್, ವೆಂಕಟೇಶಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಶೈಲಜಾ, ಕೆ.ಆರ್.ನಾರಾಯಣಸ್ವಾಮಿ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಮಸೂದಾ ಪರ್ವಿನ್, ಶೈಲಜಾ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಎಇಇ ಆನಂದ್ ತಿಳಿಸಿದ್ದಾರೆ.

ಎಚ್.ಹೊಸಕೋಟೆ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಪುರ ಗ್ರಾಮದ ಬಿಜೆಪಿ ಬೆಂಬಲಿತ ಎಂ.ಎಸ್.ನಾಗರಾಜು, ಉಪಾಧ್ಯಕ್ಷ ಸ್ಥಾನಕ್ಕೆ ಶಾಹೀನಾ ಖಾನಂ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಲಕ್ಕೂರು ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ನಾರಾಯಣಸ್ವಾಮಿ, ಬಿಜೆಪಿ ವತಿಯಿಂದ ಆರ್.ಸುರೇಶ್‌ರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಮೀನಾ ಮತ್ತು ಹೇಮಾವತಿ ಸ್ಪರ್ಧಿಸಿದ್ದರು. ಕೆ.ನಾರಾಯಣಸ್ವಾಮಿ 9 ಮತ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮೀನಾ 9 ಮತ ಪಡೆದು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ರುದ್ರಪ್ಪ ಹೇಳಿದ್ದಾರೆ.

ಹಸಾಂಡಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮಂಜುಳಾ, ಉಪಾಧ್ಯಕ್ಷರಾಗಿ ಅನ್ನಪೂರ್ಣಮ್ಮ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಎಸ್.ರಂಗಸ್ವಾಮಿ ಪ್ರಕಟಿಸಿದ್ದಾರೆ.
ದಿನ್ನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸತ್ಯವತಮ್ಮ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ವರಲಕ್ಷ್ಮಮ್ಮ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಆನಂದ್ ತಿಳಿಸಿದ್ದಾರೆ.

ಬಿಜೆಪಿ ವಶದಲ್ಲಿದ್ದ ಲಕ್ಕೂರು ಮತ್ತು ತೊರ‌್ನಹಳ್ಳಿ ಜೆಡಿಎಸ್ ಪಾಲಾದರೆ, ಜೆಡಿಎಸ್ ತೆಕ್ಕೆಯಲ್ಲಿದ್ದ ಕೊಂಡಶೆಟ್ಟಹಳ್ಳಿ ಗ್ರಾ.ಪಂ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.