ADVERTISEMENT

ಮಿನಿ ವಿಧಾನಸೌಧ: ಪೂರ್ಣಗೊಳ್ಳದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 4:45 IST
Last Updated 23 ಜೂನ್ 2012, 4:45 IST
ಮಿನಿ ವಿಧಾನಸೌಧ: ಪೂರ್ಣಗೊಳ್ಳದ ಕಾಮಗಾರಿ
ಮಿನಿ ವಿಧಾನಸೌಧ: ಪೂರ್ಣಗೊಳ್ಳದ ಕಾಮಗಾರಿ   

ಕೋಲಾರ: ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಕೇಂದ್ರದಲ್ಲಿ ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡ ಮಿನಿ ವಿಧಾನಸೌಧ ನಿರ್ಮಾಣದ ಕನಸು ಇನ್ನೂ ನೆರವೇರಿಲ್ಲ. ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ಮೀರಿ ನಾಲ್ಕು ತಿಂಗಳಾದರೂ ನಡೆಯುತ್ತಲೇ ಇದೆ. ಈ ವರ್ಷ ಪೂರ್ಣಗೊಳ್ಳಬಹುದೆಂಬ ನಿರೀಕ್ಷೆ ಮಾತ್ರ ಮುಂದುವರಿದಿದೆ.

ನಗರದ ಮೆಕ್ಕೆ ವೃತ್ತದ ಸಮೀಪ ಮಿನಿ ವಿಧಾನಸೌಧದ ಕಾಮಗಾರಿ ನಡೆಯುತ್ತಿದೆ. 2008ರ ಫೆಬ್ರುವರಿ 20ರಂದು ಶುರುವಾದ ಕಾಮಗಾರಿಯನ್ನು ಈ ವರ್ಷದ ಕೊನೆ ಹೊತ್ತಿಗೆ ಪೂರ್ಣಗೊಳಿಸಬೇಕು ಎಂದು ಇಲಾಖೆ ಗುತ್ತಿಗೆದಾರರಿಗೆ ಸೂಚಿಸಿದೆ. ಈಚಿನ ದಿನಗಳಲ್ಲಿ ಕಾಮಗಾರಿ ವೇಗ ಪಡೆದಿದೆ ಎಂಬುದು ಸಮಾಧಾನಕರ ವಿಷಯ.

5 ಕೋಟಿ: ಹಳೆ ತಾಲ್ಲೂಕು ಕಚೇರಿ ಮತ್ತು ಉಪನೋಂದಣಾಧಿಕಾರಿ ಕಚೇರಿ ಇದ್ದ ಕಟ್ಟಡದ ಸ್ಥಳದಲ್ಲೆ 5 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆಗೆ ವಹಿಸಿತ್ತು. ಇಲಾಖೆ ಬೆಂಗಳೂರಿನ ಎಂ.ಬಿ.ಸುಬ್ಬಾರೆಡ್ಡಿ ಎಂಬುವರಿಗೆ ಒಂದು ವರ್ಷದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿ ಟೆಂಡರ್ ನೀಡಿತ್ತು.

ಇಲಾಖೆ ಪ್ರಕಾರ 2009ರ ಫೆ.19ರಂದು ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಪೂರ್ಣಗೊಳ್ಳಲಿಲ್ಲ. ಸದ್ಯದ ವಸ್ತುಸ್ಥಿತಿ ಎಂದರೆ ನಿಗದಿಯಾಗಿರುವ 5 ಕೋಟಿಯಲ್ಲಿ ಇದುವರೆಗೆ 3.6 ಕೋಟಿ ಮಾತ್ರ ಖರ್ಚಾಗಿದೆ.

ಕಾರಣ: ವರ್ಷಗಟ್ಟಲೆ ಕಾಮಗಾರಿ ನಿಧಾನಗೊಳ್ಳಲು ಕಾರಣ ಏನು ಎಂದರೆ ಇಲಾಖೆ ಎಂಜಿನಿಯರ್‌ಗಳು ಪಟ್ಟಿಯನ್ನೇ ನೀಡುತ್ತಾರೆ. ಕಾಮಗಾರಿ ಆರಂಭಿಸುವ ಮುನ್ನ ಹಳೆ ಕಟ್ಟಡ ಕೆಡವಿ, ಗುತ್ತಿಗೆದಾರರಿಗೆ ನಿವೇಶನ ಬಿಟ್ಟುಕೊಡುವ ಕೆಲಸವೇ ತಿಂಗಳು ಗಟ್ಟಲೆ ನಡೆಯಿತು. ಅದು ನಿಧಾನವಾದ ಬೆನ್ನಿಗೇ, 2009ರಲ್ಲಿ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತಲೆದೋರಿತ್ತು. ಕಾಮಗಾರಿಗೆ ಅಗತ್ಯವಿದ್ದ ಮರಳನ್ನು ಪಡೆಯುವುದು ಕಷ್ಟವಾಗಿತ್ತು.

ಹೀಗಾಗಿ ಕಾಮಗಾರಿ ಕುಂಟುತ್ತಾ ಸಾಗಿತ್ತು ಎನ್ನುತ್ತಾರೆ ಇಲಾಖೆಯ ಸಹಾಯಕ ಎಂಜಿನಿಯರ್ ವಿ.ಪಿ.ಬಾಲಾಜಿ.
ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದ `ಪ್ರಜಾವಾಣಿ~ಯೊಡನೆ ಮಾತನಾಡಿದ ಅವರು, ಸರ್ಕಾರದಿಂದ ಹಣ ಬಿಡುಗಡೆಯಾಗುವ ಪ್ರಕ್ರಿಯೆಯೂ ನಿಧಾನಗತಿಯಲ್ಲಿ ನಡೆಯಿತು. ಕಾಮಗಾರಿ ವಿಳಂಬವಾದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು, ಮತ್ತೆ ಅವಧಿ ವಿಸ್ತರಣೆಗೆ ಅನುಮತಿ ಪಡೆಯಬೇಕಾಯಿತು. ಮುಖ್ಯವಾಗಿ ಮರಳಿನ ಸಮಸ್ಯೆ ದೊಡ್ಡದಾಗಿ ಪರಿಣಮಿಸಿದೆ.

ಪ್ರಸ್ತುತ ವರ್ಷವೂ ಬರಗಾಲದ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಜಿಲ್ಲೆಯಲ್ಲಿ ಎಲ್ಲಿಯೂ ಮರಳು ಗಣಿಗಾರಿಕೆ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ, ಮರಳು ದೊರಕದೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ಕಾಮಗಾರಿ ವೇಗ ಪಡೆದಿದೆ ಎಂದು ವಿವರಿಸಿದರು.

ಪ್ರಸ್ತುತ ಇದೇ ವರ್ಷ ಡಿಸೆಂಬರ್ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸೆಪ್ಟೆಂಬರ್ ಹೊತ್ತಿಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. 2013ರಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಎರಡು ಮಹಡಿಯ ಕಟ್ಟಡದಲ್ಲಿ ಎರಡನೇ ಮಹಡಿಗೆ ಮೇಲ್ಛಾವಣಿ ಹೊದಿಸುವ ಕೆಲಸ ಈ ತಿಂಗಳ ಕೊನೆಯಲ್ಲಿ ಆರಂಭವಾಗಿ ಒಂದು ತಿಂಗಳ ಅವಧಿಯೊಳಗೆ ಮುಗಿಯಲಿದೆ.

ನೆಲಮಹಡಿಯಲ್ಲಿ ಟೈಲ್ಸ್ ಹಾಕುವ ಕೆಲಸ ಮುಗಿದಿದೆ. ಮೊದಲ ಮತ್ತು ಎರಡನೇ ಮಹಡಿಯ ಹೊರಭಾಗದ ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡಬೇಕಿದೆ. ಬೇಸ್‌ಮೆಂಟ್‌ನಲ್ಲಿ ಕಾರು ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಚಿಕ್ಕದು-ದೊಡ್ಡದು ಸೇರಿ ಒಟ್ಟು 30 ಕೊಠಡಿಗಳಿರುವ ಈ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಉಪನೋಂದಣಾಧಿಕಾರಿ ಕಚೇರಿ, ತೂಕ ಮತ್ತು ಅಳತೆ ನಿಯಂತ್ರಣಾಧಿಕಾರಿ ಮತ್ತು ಸಣ್ಣ ನೀರಾವರಿ ಇಲಾಖೆ ಉಪವಿಭಾಗದ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.

ಕಲೆಗಾರಿಕೆ: ಕಟ್ಟಡದ ಹೊರಭಾಗದಲ್ಲಿ ಅಳವಡಿಸುವ ಕಂಬಗಳಿಗೆ ಕುಸುರಿ ಕೆಲಸ ಮತ್ತು ಆರ್ಟ್ ವರ್ಕ್ ಮಾಡಲು ಮುಖ್ಯ ವಾಸ್ತುಶಿಲ್ಪಿಗಳು ಯೋಜನೆ ರೂಪಿಸಿದ್ದಾರೆ. ಅದರಂತೆ ಕಾರ್ಯ ನಿರ್ವಹಿಸುವ ಕಲಾವಿದರಿಗಾಗಿ ಹುಡುಕಾಟ ನಡೆದಿದೆ. ಕಟ್ಟಡ ಪೂರ್ಣಗೊಂಡರೆ, ಮುಖ್ಯ ವೃತ್ತದಿಂದ ಅತ್ಯಂತ ಆಕರ್ಷಕವಾಗಿ ಕಾಣಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.