ADVERTISEMENT

ಮೀನು ಸಾಕಿ ಹಣ ಸಂಪಾದಿಸಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 7:19 IST
Last Updated 17 ಅಕ್ಟೋಬರ್ 2017, 7:19 IST
ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಕಚೇರಿ ಹಿಂಭಾಗದಲ್ಲಿ ನಿರ್ಮಿಸಿರುವ ಮೀನು ಸಾಕಾಣೆ ತೊಟ್ಟಿಗಳನ್ನು ತಾ.ಪಂ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಶನಿವಾರ ವೀಕ್ಷಿಸಿದರು.
ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಕಚೇರಿ ಹಿಂಭಾಗದಲ್ಲಿ ನಿರ್ಮಿಸಿರುವ ಮೀನು ಸಾಕಾಣೆ ತೊಟ್ಟಿಗಳನ್ನು ತಾ.ಪಂ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಶನಿವಾರ ವೀಕ್ಷಿಸಿದರು.   

ಮುಳಬಾಗಿಲು: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಬಹುಪಾಲು ಕೆರೆ, ಕುಂಟೆಗಳು ತುಂಬಿದ್ದು, ಮೀನು ಮರಿ ನೀಡಲಾಗುವುದು. ರೈತರು ಮೀನು ಸಾಕಾಣಿಕೆ ಮಾಡಿ ಹಣ ಸಂಪಾದಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ತಿಳಿಸಿದರು.

ನಗರದಲ್ಲಿ ನಡೆದ ಮಿನುಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಮೀನು ಸಾಕಾಣಿಕೆದಾರರ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 662 ಕೆರೆಗಳಿವೆ. ಈ ಕೆರೆಗಳಲ್ಲಿ ಮೀನು ಮರಿ ಸಾಕಾಣಿಕೆ ಮಾಡಲು ನಿರ್ಧರಿಸಲಾಗಿದೆ. ಜತೆಗೆ ತಾ.ಪಂ ಕಚೇರಿ ಹಿಂಭಾಗದಲ್ಲಿ ನಿರ್ಮಿಸಿರುವ ತೊಟ್ಟಿಗಳಲ್ಲಿ ಮೀನು ಸಾಕಲಾಗುತ್ತದೆ ಎಂದು ಹೇಳಿದರು.

ಮೀನಿನ ಮಾಂಸ ತಿನ್ನುವುದರಿಂದ ಬುದ್ಧಿ ಶಕ್ತಿ ಹೆಚ್ಚುವ ಜತೆಗೆ ಆರೋಗ್ಯ ವೃದ್ಧಿಸುತ್ತದೆ. ನಗರದಲ್ಲಿ ಮೀನು ಮಾರುಕಟ್ಟೆ ತೆರೆಯಲು ಉದ್ದೇಶಿಸಲಾಗಿದ್ದು, ಮಾರುಕಟ್ಟೆಗೆ ಸರ್ಕಾರ ₹ 1 ಕೋಟಿ ಮಂಜೂರು ಮಾಡುತ್ತದೆ. ಕೆರೆ, ಕುಂಟೆ ಹಾಗೂ ಬಾವಿಗಳಲ್ಲಿ ಮೀನು ಸಾಕುವವರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಹೆಸರು ನೊಂದಾಯಿಸಿ ಮುಂಗಡ ಹಣ ಪಾವತಿಸಬೇಕು ಎಂದು ವಿವರಿಸಿದರು.

ADVERTISEMENT

50 ಲಕ್ಷ ಮೀನು: ‘ಒಂದು ಹೆಕ್ಟೇರ್ ಜಲ ವಿಸ್ತೀರ್ಣ ಪ್ರದೇಶದಲ್ಲಿ 4 ಸಾವಿರ ಮೀನು ಮರಿ ಸಾಕಬಹುದು. ತಾಲ್ಲೂಕಿನಲ್ಲಿ 2,600 ಹೆಕ್ಟೇರ್ ಜಲ ವಿಸ್ತೀರ್ಣ ಜಾಗವಿದ್ದು, 50 ಲಕ್ಷ ಮೀನು ಮರಿ ಸಾಕುವ ಗುರಿ ಇದೆ. ಮೀನು ಸಾಕಾಣಿಕೆದಾರರು ಮಳೆ ನಿಲ್ಲುವವರೆಗೂ ಕೆರೆಗಳಲ್ಲಿ ಮೀನು ಮರಿಗಳನ್ನು ಬಿಡಬಾರದು. ಮಳೆ ಮುಂದುವರಿದರೆ ನೀರು ಬೇರೆ ಕಡೆಗೆ ಹರಿದು ಹೋಗುವಾಗ ಜತೆಯಲ್ಲೇ ಮೀನುಗಳು ಹೋಗುತ್ತವೆ’ ಎಂದು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್.ರಾಜಣ್ಣ ತಿಳಿಸಿದರು.

ಖಾಸಗಿಯಾಗಿ ಮೀನು ಮರಿಗಳನ್ನು ಖರೀದಿಸಬಾರದು. ಬದಲಿಗೆ ಸರ್ಕಾರದ ವತಿಯಿಂದ ವಿತರಿಸುವ ಮರಿಯನ್ನು ತೆಗೆದುಕೊಳ್ಳಬೇಕು. ಡೆಂಗಿ ಜ್ವರಕ್ಕೆ ಕಾರಣವಾಗುವ ಲಾರ್ವಗಳನ್ನು ತಿನ್ನುವ ಗಪ್ಪಿ ಮೀನುಗಳನ್ನು ಗ್ರಾಮ ಪಂಚಾಯಿತಿಗಳಿಂದ ಉಚಿತವಾಗಿ ವಿತರಿಸಲಾಗುತ್ತದೆ. ಸಾರ್ವಜನಿಕರು ಈ ಮೀನಿನ ಮರಿಗಳನ್ನು ಪಡೆದು ಮನೆಯ ತೊಟ್ಟಿಗಳಲ್ಲಿ ಬಿಡಬಹುದು ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮಾರಪ್ಪ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಿ.ಶಿವಶಂಕರ್, ಮೀನು ಸಾಕಾಣಿಕೆದಾರರಾದ ಪ್ರಭಾಕರ್, ನಾರಾಣಸ್ವಾಮಿ, ಕೃಷ್ಣಪ್ಪ, ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.