ADVERTISEMENT

ಮುಖ್ಯಮಂತ್ರಿ ಭೇಟಿ ಹಿನ್ನೆಲೆ: ಪ್ರತಿಭಟನೆಗೆ ಸಿದ್ಧತೆ

ಸಮಸ್ಯೆಗಳ ಕಡೆಗೆ ಗಮನ ಸೆಳೆಯುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 8:45 IST
Last Updated 24 ಸೆಪ್ಟೆಂಬರ್ 2013, 8:45 IST

ಕೋಲಾರ: ಜಿಲ್ಲೆಗೆ ಸೆ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲು, ಮನವಿ ಸಲ್ಲಿಸಲು ಸಿದ್ಧತೆ ನಡೆಸಿವೆ.

ಉಪನ್ಯಾಸಕರ ಸಂಘ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡು­ತ್ತಿರುವ ಅತಿಥಿ ಉಪನ್ಯಾಸಕರ ಹಲ­ವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಮತ್ತು ಕರ್ನಾ­ಟಕ ರಾಜ್ಯ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಒಕ್ಕೂಟದ ನೇತೃತ್ವದಲ್ಲಿ ಅಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡಿ, ಕಾಯಂಗೊಳಿಸ­ಬೇಕು, ಯುಜಿಸಿ ನಿಯಮದಂತೆ ಪ್ರತಿ ತಿಂಗಳು 25 ಸಾವಿರ ರೂಪಾಯಿ ವೇತನ ನಿಗದಿಗೊಳಿಸಬೇಕು. ಉಪನ್ಯಾಸಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ, ಕನಿಷ್ಠ 5 ವರ್ಷ ಸೇವಾನುಭವ ಆಧರಿಸಿ ವರ್ಷಕ್ಕೆ 5 ರಂತೆ ಕೃಪಾಂಕವನ್ನು ನೀಡಬೇಕು, ವಯೋ­ಮಿತಿ ಮೀರಿರುವ ಮತ್ತು ಮೀರುತ್ತಿರುವ ಅತಿಥಿ ಉಪನ್ಯಾಸಕರಿಗೆ ಉಪನ್ಯಾಸಕ ನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡ­ಬೇಕು ಎಂದು ಆಗ್ರಹಿಸಿ ಪ್ರತಿಭಟನೆ­ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮತ್ತು ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯ ಖಜಾಂಚಿ ಶ್ರೀನಿವಾಸಾಚಾರ್, ಉಪ­ನ್ಯಾಸಕರ ಸಂಘದ ಪ್ರಮುಖರಾದ ಮುನಿ­ಯಪ್ಪ, ರವಿಕುಮಾರ್‌, ಚೌಡೇ­ಗೌಡ, ರಮಾನಂದ, ಶ್ರೀನಿವಾಸ್‌ ತಿಳಿ­ಸಿದ್ದಾರೆ.

ಮಾತುಕತೆಗೆ ಅವಕಾಶ: ಪರಿಶಿಷ್ಟ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಸಮುದಾಯದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಯ ಗಮನ ಸೆಳೆಯಲು ಅವಕಾಶ ನೀಡಬೇಕು ಎಂದು  ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕದ ಪ್ರಮುಖರು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರಿಗೆ ಮನವಿ ಸಲ್ಲಿಸಿದರು.

ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಎಸ್ಸಿ,ಎಸ್ಟಿ ಮತ್ತು ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ರಚನೆಗೊಂಡ ಎಲ್.ಸಿ.­ಮಿಲ್ಲರ್ ಸಮಿತಿ, ನಾಗನಗೌಡ ಆಯೋಗ, ಎಲ್.ಜಿ.ಹಾವನೂರ್, ಟಿ.ವೆಂಕಟಸ್ವಾಮಿ, ಹಾಗೂ ಚಿನ್ನಪ್ಪರೆಡ್ಡಿ ಆಯೋಗಗಳ ವರದಿ ಶಿಫಾರಸುಗಳನ್ನು ಅನು­ಷ್ಠಾನಷ್ಟಾನಗೊಳಿಸಲು ಮುಖ್­ಯಮಂತ್ರಿಯನ್ನು ಕೋರಲಾಗುವುದು ಎಂದು ಅವರು ಹೇಳಿದರು.

ಮಹಾಸಭಾದ ಅಧ್ಯಕ್ಷ ನಾರಾ­ಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ದೊಡ್ಡಶಿವಾರ ನಾರಾಯಣಸ್ವಾಮಿ, ವಿಜಿ, ಮಾಸ್ತಿ ರುದ್ರಪ್ಪ, ಮುನಿಕದಿರಪ್ಪ, ಮುನಿರಾಜು, ಆನಂದ್ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಉಪ­ಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.