ADVERTISEMENT

ಮುಖ್ಯ ಶಿಕ್ಷಕನ ವಿರುದ್ಧ ಪ್ರತಿಭಟನೆ

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 10:19 IST
Last Updated 25 ಡಿಸೆಂಬರ್ 2012, 10:19 IST

ಕೋಲಾರ: ತಾಲ್ಲೂಕಿನ ಕೆಂಬೋಡಿ ಜನತಾ ಪ್ರೌಢಶಾಲೆ ಮುಖ್ಯ ಶಿಕ್ಷಕನ ಅಸಭ್ಯ ವರ್ತನೆ ಖಂಡಿಸಿ ಸೋಮವಾರ ಜನವಾದಿ ಮಹಿಳಾ ಸಂಘಟನೆ, ಎಸ್‌ಎಫ್‌ಐ ಹಾಗೂ ಮಹಿಳಾ ಜಾಗೃತಿ ವೇದಿಕೆ ನೇತೃತ್ವದಲ್ಲಿ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟಿಸಿದರು.

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಎದುರು ಗುಂಪುಗೂಡಿದ ಸಂಘಟನೆಯ ಮುಖಂಡರು ಹಾಗೂ ವಿದ್ಯಾರ್ಥಿನಿಯರು ಮಾತನಾಡಿ, ಮುಖ್ಯ ಶಿಕ್ಷಕನ ದುರ್ವರ್ತನೆ ಬಗ್ಗೆ ಪೋಷಕರು, ಗ್ರಾಮಸ್ಥರು ಮೇಲಿಂದ ಮೇಲೆ ದೂರು ಸಲ್ಲಿಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿ ಸದಸ್ಯರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನತಾ ಪ್ರೌಢಶಾಲೆಯು ಬಡ ಮಕ್ಕಳಿಗೆ ಶಿಕ್ಷಣ ನೀಡಿ ಸಾಮಾಜಿಕ ಪ್ರಗತಿಗೆ ಮುನ್ನುಡಿ ಬರೆದಿತ್ತು. ಆದರೆ ಈಗ ಶಾಲೆ ಹೆಸರಿಗೆ ಧಕ್ಕೆಯಾಗಿದೆ ಎಂದು ಹೇಳಿದರು.

ಮುಖ್ಯ ಶಿಕ್ಷಕರೊಬ್ಬರಿಂದ ದುಷ್ಕೃತ್ಯದಿಂದ ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುವ ಪರಿಸ್ಥಿತಿ ತಲೆದೋರಿದೆ. ಜನತಾ ಪ್ರೌಢಶಾಲೆಯ ಈ ಘಟನೆಯಿಂದ ಇಡಿ ಜಿಲ್ಲೆ ತಲೆತಗ್ಗಿಸುವಂತೆ ಆಗಿದೆ ಎಂದು ದೂರಿದರು.

ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಗೀತಾ ಮಾತನಾಡಿ, ಇಲಾಖೆ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು. ಕೊನೆಯ ಪಕ್ಷ ಅಮಾನತು ಆದೇಶ ಹೊರಡಿಸಬೇಕು. ಮಾಧ್ಯಮದಲ್ಲಿ ಮೇಲಿಂದ ಮೇಲೆ ವರದಿಗಳು ಬರುತ್ತಿದ್ದರೂ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವೋಚ್ಛ ನ್ಯಾಯಾಲಯ ಪ್ರತಿ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳ ದೌರ್ಜನ್ಯ ವಿರೋಧಿ ಸಮಿತಿ ಇರಬೇಕು ಎಂದು ಆದೇಶಿಸಿದೆ. ಆದರೆ ಅದು ಪಾಲನೆಯಾಗುತ್ತಿಲ್ಲ. ಇದರಿಂದ ಲೈಂಗಿಕ ಕಿರುಕುಳ ಹೆಚ್ಚುತ್ತಿವೆ ಎಂದು ಸಂಘಟನೆ ಮುಖಂಡರು ಅಭಿಪ್ರಾಯಪಟ್ಟರು.

`ಪಾಲಕರು ಶಿಕ್ಷಣಕ್ಕಿಂತ ನಮ್ಮ ಮಕ್ಕಳ ಮಾನ ಮುಖ್ಯ ಎಂದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಯಾವುದೇ ಕಾರಣಕ್ಕೂ ಶಿಕ್ಷಣ ಇಲಾಖೆ ಅಧಿಕಾರಿಗಳು ಅಸಭ್ಯವಾಗಿ ವರ್ತಿಸಿದ ಶಿಕ್ಷಕನಿಗೆ ವೃತ್ತಿ ಮುಂದುವರಿಸಲು ಅವಕಾಶ ಮಾಡಿಕೊಡಬಾರದು' ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಡಿಡಿಪಿಐ ಪದ್ಮನಾಭಯ್ಯ, ಇಲಾಖೆಗೆ ಘಟನೆ ಕುರಿತು ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್‌ಎಫ್‌ಐ ಮುಖಂಡರಾದ ವಾಸುದೇವರೆಡ್ಡಿ, ಮಾರ್ಕೊಂಡಪ್ಪ, ಮಹಿಳಾ ಜಾಗೃತಿ ವೇದಿಕೆಯ ಮಂಗಳಾ, ಜನವಾದಿ ಮಹಿಳಾ ಸಂಘಟನೆಯ ಸುಶೀಲಾ, ಆಂಜಿನಮ್ಮ ಹಾಗೂ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.