ಶ್ರೀನಿವಾಸಪುರ ತಾಲ್ಲೂಕಿನ ಮಣಿಗಾನಹಳ್ಳಿಯ ಗೆಳೆಯ ಶ್ರೀರಾಮರೆಡ್ಡಿ ತಮ್ಮ ಮಾವಿನ ತೋಟ ನೋಡಲು ಬರುವಂತೆ ಬಹಳ ದಿನಗಳಿಂದ ಹೇಳುತ್ತಿದ್ದರು. ಮೊನ್ನೆ ಬೈಕ್‌ನ ಬೆನ್ನೇರಿ ಮಣಿಗಾನಹಳ್ಳಿಗೆ ಹೊರಟೆ. ಗೆಳೆಯನ ಮನೆಗೆ ಹೋಗುವ ರಸ್ತೆಯ ತಿರುವಿನಲ್ಲಿ ಒಂದು ಪಾಳುಬಿದ್ದ ಜಂತೆ ಮನೆಯ ಬೋದಿಗೆಯ ಕೆಳಗಿನ ಕಿಂಡಿಯಲ್ಲಿ ಮರಿಗಳಿಗೆ ಗುಟುಕು ನೀಡುತ್ತಿದ್ದ ಜುಟ್ಟುಹಕ್ಕಿ (ಹೂಪೋ ಹಕ್ಕಿ)ಜೋಡಿ ಕಾಣಿಸಿತು. ಬೈಕ್‌ನ ಓಟಕ್ಕೆ ಬ್ರೇಕ್ ಬಿತ್ತು.
ವಾಹ್! ಜುಟ್ಟುಹಕ್ಕಿ ಜೋಡಿ ಕಂಡು ಎಷ್ಟು ವರ್ಷವಾಗಿತ್ತು. ಎಂದೋ ಹುಡುಗನಾಗಿದ್ದಾಗ ನಮ್ಮ ಹಳ್ಳಿಯ ಹಳೆ ಭಜನೆ ಮನೆಯ ಬೋದಿಗೆಗಳ ಕೆಳಗಿನ ಕಿಂಡಿಗಳಲ್ಲಿ ಅಂಥ ದೃಶ್ಯ ಸಾಮಾನ್ಯವಾಗಿತ್ತು. ದಿನ ಕಳೆದಂತೆ ಹಳೆ ಭಜನೆ ಮನೆ ಕಾಂಕ್ರೀಟ್ ಕಟ್ಟಡವಾಗಿ ಮಾರ್ಪಟ್ಟಿತು. ಅಲ್ಲಿ ಇರುತ್ತಿದ್ದ ಪುಟ್ಟ ಬಾವಲಿ, ಜುಟ್ಟುಹಕ್ಕಿ, ಮೈನಾದಂಥ ಹಕ್ಕಿಗಳು ನೆಲೆ ಕಳೆದುಕೊಂಡು ಕಣ್ಮರೆಯಾದವು.
ಆದರೆ ಅಂದು ಕಂಡಿದ್ದ ಮತ್ತೆ ಕಾಣದಾದ ಎಲ್ಲ ಬಗೆಯ ಹಕ್ಕಿಗಳೂ ಈ ಪಾಳು ಮನೆಯ ಅಳಿದುಳಿದ ಗೋಡೆಗಳ ಬೋದಿಗೆ ಕಿಂಡಿಗಳಲ್ಲಿ ಕಾಣಿಸಿಕೊಂಡಾಗ ನೆನಪು ಕಾಡಿತು. ಮೈನಾ, ಜುಟ್ಟುಹಕ್ಕಿ ಜೋಡಿಗಳು ಎಲ್ಲಿಂದಲೋ ಬಾಯಲ್ಲಿ ಹುಳುಗಳನ್ನು ಹಿಡಿದು ತಂದು ಮರಿಗಳಿಗೆ ಉಣಿಸುತ್ತಿದ್ದವು. ಮರಿಗಳು ಅಮ್ಮನ ಕೊಕ್ಕಿಗೆ ಬಾಯಿ ಹಾಕಿ ಹಸಿವು ನೀಗಿಸಿಕೊಳ್ಳುತ್ತಿದ್ದವು. ಮತ್ತೆ ಹಾರಿಹೋಗಿ, ಹಾರಿಬಂದು ಗುಟುಕು ಕೊಡುತ್ತಿದ್ದವು. ಅವು ತಮ್ಮ ಮರಿಗಳನ್ನು ಪ್ರೀತಿಯಿಂದ ಪೊರೆಯುತ್ತಿದ್ದ ಪರಿಯನ್ನು ಕಂಡು ಆನಂದಿಸುತ್ತಿದ್ದಂತೆ, ಅಲ್ಲಿಂದ ತುಸು ದೂರದಲ್ಲಿದ್ದ ಹಳೆಯ ಅರಳಿ ಮರದಲ್ಲಿ ಹಕ್ಕಿಗಳ ಚಿಲಿಪಿಲಿ ಕಿವಿಗೆ ಬಿದ್ದು ಆ ಕಡೆ ನೋಡಿದೆ.
ಅಬ್ಬಾ! ಅದೆಷ್ಟು ಹಕ್ಕಿಗಳು. ಆ ಎತ್ತರದ ಮರದ ರೆಂಬೆ ಕೊಂಬೆಗಳ ಮೇಲೆ ಕುಳಿತು ಚಿಲಿಪಿಲಿಗುಟ್ಟುವ ಹಕ್ಕಿಗಳ ವೈವಿಧ್ಯಮಯ ಬಣ್ಣ, ಗೂಗಿಗೆ ಮರುಳಾಗದಿರಲು ಸಾಧ್ಯವೇ ಇರಲಿಲ್ಲ.
ಆ ಮರ ಅವರ ಮುತ್ತಾತನ ಕಾಲದಿಂದಲೂ ಇದೆಯಂತೆ. ಕೊಂಬೆಗಳ ತುಂಬಾ ಪೊಟರೆಗಳು. ಪ್ರತಿ ಪೊಟರೆಯಲ್ಲೂ ಹಕ್ಕಿಗಳ ಮೊಟ್ಟೆ ಮರಿಗಳು. ಕೀ...ಕೀ ಎಂದು ಹಾರುವ ಗಿಳಿವಿಂಡು, ಬೆಳವಾಯಿ, ಬೆಳ್ಳಕ್ಕಿ, ಗೊರವಂಕ, ಹೆಬ್ಬೆಟ್ಟು ಗಾತ್ರದ ಹೆಸರು ಗೊತ್ತಿಲ್ಲದ ಅದೆಷ್ಟೋ ಬಣ್ಣ ಬಣ್ಣದ ಹಕ್ಕಿಗಳು. ಜೊತೆಗೆ ಅಳಿಲುಗಳು ಮರದ ಕೊಂಬೆಗಳ ಮೇಲೆ ಚುವ್...ಚುವ್ ಎಂದು ಜಿಗಿದಾಡುವ ನಯನ ಮನೋಹರ ದೃಶ್ಯ.
ಶ್ರೀರಾಮರೆಡ್ಡಿ ಹೇಳುವಂತೆ ಈ ಮರ ಮುದಿಯಾದಂತೆ ಕೆಲವೊಮ್ಮೆ ಕೊಂಬೆಗಳು ಮುರಿದು ಬೀಳುತ್ತಿದ್ದವು. ಅಕಸ್ಮಾತ್ ಅವು ಕೆಳಗೆ ಓಡಾಡುವವರ ಮೇಲೆ ಬಿದ್ದರೆ ಗತಿಯೇನು ಎಂಬ ಪ್ರಶ್ನೆಯೂ ಬಂದಿತ್ತು. ಮರವನ್ನು ಕಡಿಯುವ ಸಲಹೆಯೂ ಇತ್ತು. ಆದರೆ ಪಕ್ಷಿಧಾಮದಂತಿದ್ದ ಮರವನ್ನು ಕಡಿಯಲು ಅವರ ಹಿರಿಯರು ಅವಕಾಶ ಕೊಡಲಿಲ್ಲವಂತೆ. ಅದ್ದರಿಂದಲೇ ಅದು ಇನ್ನೂ ಉಳಿದುಕೊಂಡಿದೆ. ನೂರಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡುತ್ತಿದೆ.
ಸೂರ್ಯೋದಯಕ್ಕೆ ತುಸು ಮುನ್ನ ಈ ಮರದಲ್ಲಿನ ಹಕ್ಕಿಗಳು ಹಳ್ಳಿಗರನ್ನು ನಿದ್ದೆಯಿಂದ ಎಬ್ಬಿಸುತ್ತವೆ. ಗ್ರಾಮಸ್ಥರಿಗೆ ಇದೆಲ್ಲವೂ ವಿಶೇಷ ವಿದ್ಯಮಾನ ಅಲ್ಲವೇ ಅಲ್ಲ. ಅದೊಂದು ಹಕ್ಕಿ ಲೋಕದ ನಿತ್ಯ ವ್ಯವಹಾರ.
ಹಿಂದೆ ಅದೆಷ್ಟೋ ಪ್ರಾಣಿ ಪಕ್ಷಿಗಳು ಗ್ರಾಮಗಳ ಹಳೆ ಮನೆಗಳ ಗೋಡೆ ಬಿರುಕು ಹಾಗೂ ಬೋದಿಗೆಗಳ ಕೆಳಗೆ ವಾಸಿಸುತ್ತಿದ್ದವು. ಎತ್ತರದ ಮರಗಳಲ್ಲಿ ಮನೆ ಮಾಡಿಕೊಂಡಿದ್ದವು.
ಗೂಡು, ಪೊಟರೆಗಳಲ್ಲಿ ಮೊಟ್ಟೆ ಇಟ್ಟು ಮರಿಮಾಡಿ ಸಾಕುತ್ತಿದ್ದವು. ಆದರೆ ಜನರ ಅಭಿರುಚಿ ಬದಲಾದಂತೆ ಮರಗಳು ನೆಲಕ್ಕೆ ಉರುಳಿದವು. ಆಶ್ರಯ ನೀಡುತ್ತಿದ್ದ ಮನೆಗಳನ್ನು ಕೆಡವಿ ಸಿಮೆಂಟ್ ಗೋಡೆಗಳನ್ನು ನಿರ್ಮಿಸಿದ ಮೇಲೆ ಹಕ್ಕಿ ಹಳ್ಳಿ ಬಿಟ್ಟಿತು.
ಗುಬ್ಬಿ ಇದಕ್ಕೆ ಹೊರತಲ್ಲ. ಇಂಥ ಸಂದರ್ಭದಲ್ಲಿ ಹಕ್ಕಿ ಮರವನ್ನು ಹಾಗೆಯೇ ಉಳಿಸಿಕೊಂಡಿರುವ ಮಣಿಗಾನಹಳ್ಳಿ ಗ್ರಾಮಸ್ಥರ ಪಕ್ಷಿ ಪ್ರೀತಿ ಇತರರಿಗೆ ಒಂದು ಮಾದರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.