ADVERTISEMENT

ಮೆಹಂದಿ ಹಚ್ಚಿದ ಕೈಯಲ್ಲಿ ಬೊಬ್ಬೆ: ಆತಂಕ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 4:20 IST
Last Updated 21 ಆಗಸ್ಟ್ 2012, 4:20 IST

ಬಂಗಾರಪೇಟೆ: ಈದ್-ಉಲ್-ಫಿತರ್ ಅಂಗವಾಗಿ ಕೈಗೆ ಮೆಹಂದಿ ಹಚ್ಚಿಕೊಂಡ ಬಾಲಕಿಯರು, ಮಹಿಳೆಯರಿಗೆ ಬೊಬ್ಬೆ ಬಂದು ಆತಂಕದ ವಾತಾವರಣ ನಿರ್ಮಾಣವಾದ ಘಟನೆ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಭಾನುವಾರ ನಡೆದಿದೆ.

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಿಂದ ಖರೀದಿ ಮಾಡಿ ತಂದ ತ್ರಿಕೋನ ಆಕಾರದ ಮೆಹಂದಿ ಪೊಟ್ಟಣದಲ್ಲಿ ಹಾಕಲಾಗಿದ್ದ ರಾಸಾಯನಿಕ ಪದಾರ್ಥದಿಂದ ಕೈಯಲ್ಲಿ ಗುಳ್ಳೆಗಳು ಬಂದು ಹಬ್ಬದ ಸಂಭ್ರಮದಲ್ಲಿದ್ದ ಮುಸ್ಲಿಮರು ಆಸ್ಪತ್ರೆಗೆ ಧಾವಿಸುವಂತೆ ಮಾಡಿತು. ಪಟ್ಟಣವೂ ಸೇರಿದಂತೆ ಬೇತಮಂಗಲ, ಸುಂದರಪಾಳ್ಯ, ಕೆಜಿಎಫ್ ಮೊದಲಾದ ಕಡೆ ಅನಾಹುತದ ವರದಿ ಬಂದಿವೆ.

ಮೆಹಂದಿ ಹಾಕಿಕೊಳ್ಳುವುದು ಮುಸ್ಲಿಂ ಮಹಿಳೆಯರ ಸಂಪ್ರದಾಯ. ಭಾನುವಾರ ರಾತ್ರಿ ಕೆಲ ಮಹಿಳೆಯರಿಗೆ ಮೆಹಂದಿ ಹಚ್ಚಿದ ಕೈಗಳಲ್ಲಿ ಉರಿಯ ಅನುಭವ ಆಗಿ, ನಂತರ ಬೊಬ್ಬೆ ಕಾಣಿಸತೊಡಗಿತು. ಇದರಿಂದ ಆತಂಕಗೊಂಡ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದರು. ಸುದ್ದಿ ವ್ಯಾಪಕವಾಗಿ ಹಬ್ಬಿ ಕೆಲವು ಮಹಿಳೆಯರು ಮೆಹಂದಿ ಅಳಿಸಿಕೊಂಡರು.

ಸಿಂಗ್‌ಕೋನ್ ಹೆಸರಿನ ಮೆಹಂದಿ ಹಚ್ಚಿಕೊಂಡ ಅರ್ಧ ಗಂಟೆಯಲ್ಲಿ ಕೈಯಲ್ಲಿ ಉರಿ ಆಗಿದೆ. ಮೆಹಂದಿ ಉಜ್ಜಿ ತೊಳೆಯಲು ಯತ್ನಿಸಿದಾಗ ಬೊಬ್ಬೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡು ಕೈಯಲ್ಲಿದ್ದ ಮೆಹಂದಿ ಸಂಪೂರ್ಣವಾಗಿ ತೊಳೆಯಲು ನಿಂಬೆ ಹಣ್ಣಿನ ರಸ ಉಪಯೋಗಿಸಿದ್ದ ಕಾರಣ ಉರಿ ಹೆಚ್ಚಾಗಿ ಉಜ್ಜಿದಾಗ ಬೊಬ್ಬೆ ಹೆಚ್ಚಾಗಿವೆ ಎನ್ನಲಾಗಿದೆ.

ಇದೇ ಸಂದರ್ಭ ಮೆಹಂದಿ ಹಚ್ಚಿಕೊಂಡ ಮಹಿಳೆಯರಿಗೆ ತೀವ್ರ ತೊಂದರೆ ಆಗಿ ಕೆಲವರು ಮೃತಪಟ್ಟಿದ್ದಾರೆ ಎಂಬ ಗಾಳಿ ಸುದ್ದಿ ತೀಕ್ಷ್ಣವಾಗಿ ಹಬ್ಬಿತ್ತು. ಇದರಿಂದ ಮತ್ತಷ್ಟು ಗಾಬರಿಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸಿದೆವು ಎಂದು ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ ಸಜ್ಜಾದ್ `ಪ್ರಜಾವಾಣಿ~ಗೆ ವಿವರಿಸಿದರು.

ಒಬ್ಬರ ಹಿಂದೆ ಒಬ್ಬರಂತೆ 15ರಿಂದ 20 ಮಹಿಳೆಯರಿಗೆ ಈ ಅನುಭವ ಆಗಿದ್ದು, ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದರಿಂದ ಕಂಗಾಲಾದ 200-250 ಮಂದಿ ಮುಸ್ಲಿಂರು ರಾತ್ರಿ 11 ಗಂಟೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ನೆರೆದಿದ್ದರು. ವೈದ್ಯರು ತಪಾಸಣೆ ಮಾಡಿ ಏನು ತೊಂದರೆ ಇಲ್ಲ ಎಂದು ಹೇಳಿದರೂ ಆತಂಕ ಕಡಿಮೆಯಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.