ADVERTISEMENT

ಮೇವು ಸಮಸ್ಯೆ ಪರಿಹಾರ: ರೈತರಲ್ಲಿ ಮೂಡಿದ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:25 IST
Last Updated 20 ಸೆಪ್ಟೆಂಬರ್ 2013, 8:25 IST

ಮುಳಬಾಗಲು: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಮಳೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.ಕಳೆದ ವಾರವಷ್ಟೇ ಹಸಿರು ಮೇವಿಗೂ ಪರದಾಡುತ್ತಿದ್ದ ಗ್ರಾಮೀಣರಿಗೆ ಹೊಸದಾದ ಭರವಸೆ ಸಿಕ್ಕಿರುವುದು ರಾಗಿ ಫಸಲಿನಿಂದ ಎನ್ನಬಹುದು. ತಾಲ್ಲೂಕಿನಲ್ಲಿ ಕಳೆದ ವಾರದಿಂದ 2.54 ಸೆಂ.ಮೀ. ಮಳೆ ಬಿದ್ದಿದೆ. ಇದರಿಂದ ರಾಗಿ ಬೆಳೆ ಸ್ವಲ್ಪ ಸುಧಾರಿಸಿದೆ.

7.5 ಸಾವಿರ ಹೆಕ್ಟೆರ್‌ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ.  ಶೇಕಡಾ 70ರಷ್ಟು ಇಳುವರಿ ನಿರೀಕ್ಷೆ ಇದೆ ಎನ್ನುವುದು ಕೃಷಿ ಅಧಿಕಾರಿಗಳ ಅಭಿಪ್ರಾಯ.  ಆದರೆ 3.5 ಸಾವಿರ ಹೆಕ್ಟೆರ್‌ ಪ್ರದೇಶದಲ್ಲಿ ಬಿತ್ತನೆಯಾಗಿರುವ ನೆಲಗಡಲೆ ಸಂಪೂರ್ಣವಾಗಿ ನೆಲಕಚ್ಚಿದೆ. ನೆಲಗಡಲೆ ಬೆಳೆ ಕೈಗೆ ಸಿಗಲು ಸಾಧ್ಯವೇ ಇಲ್ಲ.

ಮೊಳಕೆಯಲ್ಲೇ ಫಸಲು ನೆಲಕಚ್ಚಿದೆ, ಈ ಕುರಿತು ಸರ್ಕಾರಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಇನ್ನು ಮೇವಿಗೆ ಬಂದರೆ ಜಾನುವಾರುಗಳಿಗೆ ಹಸಿರು ಮೇವು ಕಳೆದ ವಾರ ಮಳೆ ಬಾರದಿದ್ದರೇ ಗಗನ ಕುಸುಮವಾಗುತ್ತಿತ್ತು.
ರೈತರು ಮೇವು ಸಿಗದೆ ಜಾನುವಾರು­ಗಳನ್ನು ಮಾರಾಟ ಮಾಡಲು ಮುಂದಾದ ಪ್ರಸಂಗಗಳು ಕೂಡ ವರದಿಯಾಗಿತ್ತು.
ಆದರೆ ವರುಣನ ಕೃಪೆಯಿಂದ ಅಂತಹ ಪರಿಸ್ಥಿತಿ ಈಗ ಇಲ್ಲವಾಗಿದೆ. ಎಲ್ಲಡೆ ಯಥೇಚ್ಛವಾಗಿ ಸಿಗುವ ಹಸಿರು ಮೇವು ಪಶುಗಾರರಿಗೆ ನೆಮ್ಮದಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.