ADVERTISEMENT

ರಾಜಕಾಲುವೆ ಒತ್ತುವರಿ; ಜಿಂಕೆಗಳು ಅತಂತ್ರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 9:20 IST
Last Updated 17 ಸೆಪ್ಟೆಂಬರ್ 2011, 9:20 IST

ಕೆಜಿಎಫ್: ಪಾಲಾರ್ ನದಿ ವ್ಯಾಪ್ತಿಗೆ ಬರುವ ಬೃಹತ್ ರಾಜಕಾಲುವೆಯನ್ನು ದಿನೇ ದಿನೇ ಒತ್ತುವರಿ ಮಾಡಲಾಗುತ್ತಿದೆ. ಬೆಮಲ್‌ನಗರದ ಪಾಲಾರ್ ನಗರದ ಮೂಲಕ ಕೃಷ್ಣಾವರಂ ಕೆರೆಗೆ ಹಾದುಹೋಗುವ ಸುಮಾರು ಎರಡು ಕಿ.ಮೀ. ಉದ್ದದ ರಾಜಕಾಲುವೆ ಮೂಲತಃ 60 ಅಡಿ ಅಗಲವಿದ್ದು, ಒತ್ತುವರಿಯಿಂದ ಕೆಲವೆಡೆ ಹತ್ತು ಅಡಿಗೆ ಇಳಿದಿದೆ.
 
ಬೆಮಲ್‌ನಗರ ಹಾಗೂ ದೊಡ್ಡೂರು ಕರಪನಹಳ್ಳಿ ನಡುವೆ ಇರುವ ಇಳಿಜಾರಿನಲ್ಲಿ ಹಾದು ಹೋಗುವ ರಾಜಕಾಲುವೆ ನೇರವಾಗಿ ಕೃಷ್ಣಾವರಂ ಕೆರೆಗೆ ಸೇರುತ್ತಿತ್ತು. ಸದರಿ ಪ್ರದೇಶ ಬ್ಲಾಕ್ ಬಕ್ ಎಂದು ಕರೆಯಲ್ಪಡುವ ಕೊಂಬುಳ್ಳ ಜಿಂಕೆಗಳ ವಾಸಸ್ಥಾನ ಆಗಿದೆ. ಸಾವಿರಾರು ಜಿಂಕೆಗಳಿಗೆ ರಾಜಕಾಲುವೆ ಪ್ರಮುಖ ನೀರಿನ ತಾಣವಾಗಿತ್ತು. ಬೇಸಿಗೆಯಲ್ಲಿ ಹರಿಯುವ ನೀರು ಸಿಗದೆ ಇದ್ದರೂ ನಿಂತ ನೀರಾದರೂ ಜಿಂಕೆಗಳಿಗೆ ಸಿಗುತ್ತಿತ್ತು.

ಬೆಮಲ್‌ನಗರ ಸುತ್ತಮುತ್ತ ನಿವೇಶನಗಳ ರಚನೆ ಹೆಚ್ಚಾಗುತ್ತಿ ದ್ದಂತೆಯೇ ಭೂ ಮಾಫಿಯಾ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಾಣ ಮಾಡತೊಡಗಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾತೆ ಮಾಡಿಸಿ ಮನೆಗಳ ನಿರ್ಮಾಣಕ್ಕೆ ಮುಂದಾದರು. ಕೆಲವು ಧಾರ್ಮಿಕ ಸಂಸ್ಥೆಗಳು ಹಾಗೂ ವಿ
ದ್ಯಾಸಂಸ್ಥೆಗಳು ಸಹ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ತಮ್ಮ ಬೇಲಿಯನ್ನು ನಿರ್ಮಿಸಿಕೊಂಡವು.

ರಾಜಕಾಲುವೆಯನ್ನು ಒತ್ತುವರಿ ಮಾಡುವುದು ಅಪರಾಧ ಎಂಬ ಭಾವನೆ ಜನರಲ್ಲಿ ದೂರವಾದ ಕಾರಣ, ಮನೆಗಳ ನಿರ್ಮಾಣ ಎಗ್ಗಿಲ್ಲದೆ ಸಾಗಿದೆ. ಇದರಿಂದ ರಾಜಕಾಲುವೆ ದಿನೇ ದಿನೇ ಸಣ್ಣದಾಗುತ್ತ ಬಂದಿದೆ. ನೀರಿನ ಚಿಲುಮೆ ಬತ್ತಿಹೋಗಿದೆ. ನೀರಿಗಾಗಿ ಜಿಂಕೆಗಳು ಈಗ ನಗರ ಪ್ರದೇಶಗಳಿಗೆ ಬಂದು ಬೀದಿನಾಯಿಗಳಿಗೆ ಸಿಕ್ಕಿ ಸಾಯುತ್ತಿರುವ ಪ್ರಕರಣ ಹೆಚ್ಚಾಗಿವೆ. ನೀರಿಗಾಗಿ ಅಲೆದಾಡುತ್ತ ಬಂದಿದ್ದ ಗರ್ಭಿಣಿ ಜಿಂಕೆಯೊಂದು ಡಿಕೆ ಹಳ್ಳಿ ಪ್ಲಾಂಟೇಶನ್‌ನಲ್ಲಿ ನೀರಿಲ್ಲದ ಬಾವಿಗೆ ಬಿದ್ದು ಸತ್ತ ಘಟನೆ ನಡೆದಿದೆ.

ಬೆಮಲ್‌ನ ಎಚ್ ಅಂಡ್ ಪಿ ಮುಂಭಾಗದಲ್ಲಿ ಸಹ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ನಡೆದಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಕ್ರಮಗಳ ಕಟ್ಟಡಕ್ಕೆ ಪರವಾನಿಗೆ ನೀಡಿ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಭಾರತ್ ನಗರದ ಕಾರ್ಮಿಕರ ಸಹಕಾರ ಸಂಘದ ಪದಾಧಿಕಾರಿಗಳು ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ಕೈ ಮಾಡಿ ತೋರಿಸುತ್ತಿದ್ದಾರೆ.

ಪಾಲಾರ್ ನದಿಗೆ ಸೇರುವ ರಾಜಕಾಲುವೆ ಉಳಿಸುವ ಬಗ್ಗೆ ಈಗಾಗಲೇ ಬೆಮಲ್‌ನಗರದಲ್ಲಿ ಕೆಲವು ಪ್ರಜ್ಞಾವಂತ ಕಾರ್ಮಿಕರು ಜನಜಾಗೃತಿ ಉಂಟು ಮಾಡಲು ಯತ್ನಿಸುತ್ತಿದ್ದಾರೆ.

`ರಾಜಕಾಲುವೆ ಒತ್ತುವರಿ ಇದೇ ರೀತಿ ಮುಂದುವರೆದರೆ ಇನ್ನು ಮುಂದೆ ಬೀಳುವ ಮಳೆಯ ನೀರೆಲ್ಲ ಮನೆಗಳಿಗೆ ನುಗ್ಗುತ್ತದೆ. ಕಾಲುವೆ ಒತ್ತವರಿ ಬಗ್ಗೆ ಸರ್ವೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರರಿಗೆ ಬುಧವಾರ ದೂರು ನೀಡಲಾಗಿದೆ~ ಎಂದು ಈ ಕ್ಷೇತ್ರದ ಜಿ.ಪಂ. ಸದಸ್ಯೆ ನಾರಾಯಣಮ್ಮ ತಿಳಿಸಿದ್ದಾರೆ.

ರಾಜಕಾಲುವೆಯನ್ನು ಅಳೆಯುವ ಕಾರ್ಯವನ್ನು ತಕ್ಷಣ ನಿರ್ವಹಿಸುವಂತೆ ತಾಲ್ಲೂಕು ಸರ್ವೇಯರ್ ವೆಂಕಟರಾಮ್ ಅವರಿಗೆ ತಹಶೀಲ್ದಾರ್ ಮಂಗಳ ಸೂಚನೆ ನೀಡಿದ್ದಾರೆ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.