ADVERTISEMENT

ಲೋಕಾಯುಕ್ತ ಬಲೆಗೆ ಭೂ ಮಾಪಕರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 7:50 IST
Last Updated 24 ಜನವರಿ 2012, 7:50 IST

ಶ್ರೀನಿವಾಸಪುರ: ಲಂಚ ಸ್ವೀಕರಿಸುವಾಗ ಭೂಮಾಪನ ಇಲಾಖೆಯ ಇಬ್ಬರು ನೌಕರರು ಲೋಕಾಯುಕ್ತ ಪೊಲೀಸರಿಗೆ ಸೆರೆಸಿಕ್ಕ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.

ಭೂಮಾಪಕ ಹುಚ್ಚಮಾಸ್ತಿಗೌಡ ಮತ್ತು ಪರವಾನಗಿ ಭೂಮಾಪಕ ವೆಂಕಟರವಣಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ನರಸಾಪುರ ಗೋಪಿನಾಥ್ ಎಂಬುವರು ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮದ ಸಮೀಪ 2/5 ಸರ್ವೇ ನಂಬರಿನ ಜಮೀನು ಖರೀದಿಸಿದ್ದರು. ಆ ಸಂಬಂಧ ಮೋಜಣಿ ನಡೆಸಿ ನಕ್ಷೆ ನೀಡುವಂತೆ ಭೂ ಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಈ ಕೆಲಸಕ್ಕಾಗಿ ಭೂಮಾಪಕರು ರೂ.6 ಸಾವಿರ ಲಂಚಕ್ಕೆ ಒತ್ತಾಯಿಸಿದ್ದರು. ಗೋಪಿನಾಥ್ ಆರಂಭದಲ್ಲಿ ಐನೂರು ರೂಪಾಯಿ ನೀಡಿದ್ದರು. ನಂತರ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದರು. ಅಧಿಕಾರಿಗಳಿಗೆ ಉಳಿದ ಹಣ ನಾಲ್ಕು ಸಾವಿರದ ಐನೂರು ರೂಪಾಯಿ ನೀಡುವ ಸಂದರ್ಭ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಎ.ಬಿ.ಸುಧಾಕರ್, ಡಿವೈಎಸ್‌ಪಿ ಎಂ.ಟಿ.ನಾಗರಾಜ್, ಇನ್ಸ್‌ಪೆಕ್ಟರ್ ಲೋಕೇಶ್, ಸಿಬ್ಬಂದಿ ಮಂಜುನಾಥ, ವಿಜಯ್‌ಕುಮಾರ್, ಕೃಷ್ಣಾರೆಡ್ಡಿ, ಸುನೀಲ್ ಕುಮಾರ್, ನರಸಿಂಹ, ಮಂಜುಳಾ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.