ADVERTISEMENT

ವರ್ತೂರು ಹೇಳಿಕೆಗೆ ರಾಮು ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:10 IST
Last Updated 13 ಅಕ್ಟೋಬರ್ 2012, 9:10 IST

ಕೋಲಾರ: ಸಚಿವ ವರ್ತೂರು ಪ್ರಕಾಶ್ ನನ್ನ ರಾಜಕೀಯ ಇತಿಹಾಸ ಮತ್ತು ಪ್ರಭಾವವನ್ನು ಬಳಸಿಕೊಂಡು ಶಾಸಕರಾಗಿದ್ದಾರೆ. ಅವರ ಪ್ರಭಾವಬಳಸಿ ನಾನು ಬೆಳೆದಿಲ್ಲ ಎಂದು ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ ಅವರ ಪತಿ, ಮುಖಂಡ ವಕ್ಕಲೇರಿ ರಾಮು ಹೇಳಿಕೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿಂದಲೋ ಬಂದ ವರ್ತೂರು ಪ್ರಕಾಶ್ 3-4 ದಶಕಗಳ ರಾಜಕೀಯ ಇತಿಹಾಸವುಳ್ಳ ನನ್ನ ಹಾಗೂ ನನ್ನ ಕುಟುಂಬದ ಪ್ರಭಾವ ಬಳಸಿಕೊಂಡು ಶಾಸಕರಾದರು. ಅವರ ನನ್ನ ಹಾಗೂ ನನ್ನ ಕುಟುಂಬದ ಋಣದಲ್ಲಿದ್ದಾರೆ  ಎಂದರು.

ಈಚೆಗೆ ನಡೆದ, ಜಿ.ಪಂ ಅಧ್ಯಕ್ಷರ ಚುನಾವಣೆ ಬಳಿಕ ಸಚಿವರು ನನ್ನ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿರುವುದರಿಂದ ಅಸಮಾಧಾನ ಉಂಟಾಗಿದೆ ಎಂದರು. ರಾಮು ನಾನು ಬೆಳೆಸಿದ ಹುಡುಗ. ಆತ ನನ್ನನ್ನುತೊರೆದಿರುವುದರಿಂದ ನೋವಾಗಿದೆ ಎಂದು ಸಚಿವರು ಹೇಳಿರುವುದು ಸರಿಯಲ್ಲ. ಇನ್ನು ಮುಂದೆ ಸಚಿವರು ಇಂಥ ಹೇಳಿಕೆಗಳನ್ನು ನೀಡುವ ಮುನ್ನ ಯೋಚಿಸಬೇಕು ಎಂದು ಹೇಳಿದ್ದಾರೆ.

1987ರಲ್ಲಿಯೇ ನಮ್ಮ ಅತ್ತೆ ಯಶೋಧಮ್ಮ ಜನತಾದಳದಿಂದ ಸ್ಪರ್ಧಿಸಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಇಷ್ಟೆಲ್ಲ ಹಿನ್ನೆಲೆಯುಳ್ಳ ನನ್ನ ಪ್ರಭಾವವನ್ನು ಬೇರೆಯವರು ಬಳಸಿಕೊಂಡು ರಾಜಕೀಯದಲ್ಲಿ ಬೆಳೆಯಬಹುದೇ ಹೊರತು, ನಾನು ಯಾರಿಂದಲೋ ಬೆಳೆಯುವ ಅನಿವಾರ್ಯತೆ ನನಗಿಲ್ಲ ಎಂದು ಹೇಳಿದ್ದಾರೆ.ಸಚಿವ ವರ್ತೂರು ಪ್ರಕಾಶ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.