ADVERTISEMENT

ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:55 IST
Last Updated 13 ಏಪ್ರಿಲ್ 2013, 5:55 IST

ಮಾಲೂರು: ಪಟ್ಟಣದ ಮಾರಿಕಾಂಬ ವೃತ್ತ ಶುಕ್ರವಾರ ಎಂದಿನಂತೆ ಕೂಡಿರಲಿಲ್ಲ. ಅಲ್ಲಿ ಮತದಾನ ಜಾಗೃತಿ ಅಭಿಯಾನ ಮೈದಾಳಿತ್ತು. ಮಾರಿಕಾಂಬ ದೇವಾಲಯಕ್ಕೆಂದು ಬಂದವರು ಜಾಗೃತಿ ಅಭಿಯಾನದಲ್ಲಿ ಒಂದಾದರು.

ಬೆಂಗಳೂರಿನ ಕಾಲೇಜಿನ ಕೆಎಲ್‌ಇ ಶಿಕ್ಷಣ ಸಂಸ್ಥೆಯ 50 ಬಿಇಡಿ ಪ್ರಶಿಕ್ಷಣಾರ್ಥಿಗಳು ಮತದಾನದ ಕುರಿತು ಜಾಗೃತಿ ಮೂಡಿಸಲೆಂದೇ ವೃತ್ತದಲ್ಲಿ ಬೀದಿ ನಾಟಕವೊಂದನ್ನು ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.

ತಂಡದ ಮುಖ್ಯಸ್ಥ ರುದ್ರ ಮಹೇಶ್ ನೇತೃತ್ವದಲ್ಲಿ ನಡೆದ ಬೀದಿ ನಾಟಕದಲ್ಲಿ ಮತದಾನದ ಬಗ್ಗೆ ಕಾಳಜಿ ಮೂಡಿಸುವ ಹಲವು ಘೋಷಣೆಗಳನ್ನು ಪ್ರಚುರ ಪಡಿಸಲಾಯಿತು. ರಾಜಕಾರಣಿಗಳ ಹುಸಿ ಭರವಸೆ, ಮತದಾರರ ದುರಾಸೆಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ದೃಶ್ಯಗಳನ್ನು ಸಂಯೋಜಿಸಿದ್ದು ಗಮನ ಸೆಳೆಯಿತು.

5 ವರ್ಷಕ್ಕೊಮ್ಮೆ ದೊರಕುವ ಮತದಾನದ ಹಕ್ಕು ಚಲಾಯಿಸುವ ಸಂದರ್ಭದಲ್ಲಿ ಎಚ್ಚರ ತಪ್ಪಿದರೆ, ಆಮಿಷಕ್ಕೆ ಈಡಾದರೆ ಆಗುವ ಪ್ರಮಾದಗಳ ಬಗೆಗೆ ವಿದ್ಯಾರ್ಥಿಗಳು ಹೇಳುತ್ತಿದ್ದ ಮಾತುಗಳಿಗೆ ಜನ ಮೆಚ್ಚುಗೆಯಿಂದ ಚಪ್ಪಾಳೆಗಳನ್ನೂ ತಟ್ಟಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಬೀದಿ ನಾಟಕವನ್ನು ನೂರಾರು ಮಂದಿ ವೀಕ್ಷಿಸಿದರು.

ನಂತರ ಮಾತನಾಡಿದ ರುದ್ರ ಮಹೇಶ್, ವಿದ್ಯಾರ್ಥಿಗಳ ತಂಡವು ಮೂರು ದಿನಗಳ ಸಮುದಾಯ ಶಿಬಿರವನ್ನು ಹಮ್ಮಿಕೊಂಡಿದೆ.  50 ಮಂದಿ ವಿದ್ಯಾರ್ಥಿಗಳ ತಂಡ ಪಟ್ಟಣದಲ್ಲಿ ಇನ್ನೂ ಎರಡು ದಿನ ಬೀದಿನಾಟಕವನ್ನು ಪ್ರದರ್ಶಿಸಲಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.