ADVERTISEMENT

ವಿದ್ಯುತ್ ತಂತಿ ಅಪಾಯಕಾರಿ

ಅಪಾಯ ಆಹ್ವಾನಿಸುತ್ತಿವೆ ಜೋಡಿ ರಸ್ತೆ ವಿದ್ಯುತ್ ಕಂಬಗಳು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:50 IST
Last Updated 11 ಡಿಸೆಂಬರ್ 2013, 8:50 IST

ಕೆಜಿಎಫ್‌: ರಾಬರ್ಟಸನ್‌ಪೇಟೆ ಮತ್ತು ಆಂಡರಸನ್‌ಪೇಟೆ ಜೋಡಿ ರಸ್ತೆಯಲ್ಲಿ ನಗರಸಭೆ ಅಳವಡಿಸಿರುವ ದೀಪದ ಕಂಬಗಳಲ್ಲಿರುವ ವಿದ್ಯುತ್‌ ತಂತಿಗಳು ರಸ್ತೆಗೆ ಚಾಚಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ನಗರಸಭೆ ಕಚೇರಿ ಮುಂಭಾಗ­ದಲ್ಲಿಯೇ ಇರುವ ಸಾಲು ಕಂಬಗಳಲ್ಲಿ ವಿದ್ಯುತ್ ತಂತಿಗಳು ರಸ್ತೆಗೆ  ಜೋತಾ­ಡುತ್ತಿವೆ.

ಕಂಬದ ಮೇಲಿರುವ ದೀಪಕ್ಕೆ ವಿದ್ಯುತ್‌ ಸಂಪರ್ಕ ನೀಡುವ ತಂತಿ­ಗಳನ್ನು ಸಣ್ಣ ಡಬ್ಬದಲ್ಲಿ ಹಾಕಬೇಕು. ನಗರಸಭೆ ಅದಕ್ಕೂ ವ್ಯವಸ್ಥೆ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿ­ದ್ದಾರೆ. ಜೋಡಿ ರಸ್ತೆ ನಿರ್ಮಾಣವಾದ ಸಂದರ್ಭದಲ್ಲಿ ಗುತ್ತಿಗೆದಾರರು ಭೂಮಿಯೊಳಗೆ ಕೇಬಲ್‌ ಹಾಕಿ, ನಂತರ ಕಂಬದ ಒಳಗಿ­ನಿಂದ ವಿದ್ಯುತ್‌ ದೀಪಗಳಿಗೆ ಸಂಪರ್ಕ ನೀಡಬೇಕಾಗಿತ್ತು. ದೀಪದ ನಿಯಂತ್ರ­ಣಕ್ಕೆ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಗುತ್ತಿಗೆದಾರರು ಕೆಲಸ ಮಾಡಲು ವಿಫಲರಾದಾಗ ಲೋಕೋಪಯೋಗಿ ಹಾಗೂ ನಗರಸಭೆ ಅಧಿಕಾರಿಗಳ ಮಧ್ಯೆ ಪತ್ರ ಸಮರವೇ ನಡೆದಿತ್ತು.

ರಸ್ತೆ ನಿರ್ಮಾಣವಾಗಿ ಬಹಳ ದಿನ ಜೋಡಿ ರಸ್ತೆಯ ಬಹಳಷ್ಟು ದೀಪಗಳು ಬೆಳಗಲೇ ಇಲ್ಲ. ನಂತರ ನಗರಸಭೆಯೇ ತಾತ್ಕಾಲಿಕ ವ್ಯವಸ್ಥೆ ಮಾಡಿ ದೀಪ ಹೊತ್ತಿಕೊಳ್ಳುವಂತೆ ಏರ್ಪಾಟು ಮಾಡಿತು. ಆದರೆ, ಅದನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಮಾಡಲು ವಿಫಲ­ವಾಯಿತು.
ಜೋಡಿ ರಸ್ತೆ ಬಳಿ ಎರಡು ಖಾಸಗಿ ಶಾಲೆ, ಎರಡು ಸರ್ಕಾರಿ ಶಾಲೆಗಳಿವೆ. ವಿದ್ಯಾರ್ಥಿಗಳು ಆಕಸ್ಮಿಕವಾಗಿ ಅಥವಾ ಕುತೂಹಲಕ್ಕಾಗಿ ಈ ತಂತಿಗಳನ್ನು ಮುಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಅಲ್ಲದೆ ರಸ್ತೆಯಲ್ಲಿ ಓಡಾಡುವ ಬೀಡಾಡಿ ದನಗಳು ಮೈ ಉಜ್ಜಿ­ಕೊಳ್ಳಲು ವಿದ್ಯುತ್‌ ಕಂಬಗಳಿಗೆ ಮೈ ಚಾಚುತ್ತವೆ. ಈ ನಿಟ್ಟಿನಲ್ಲೂ ವಿದ್ಯುತ್ ತಂತಿ ಅಪಾಯಕಾರಿ. ರಸ್ತೆಯೊಳಗೆ ಬಂದಿ­ರುವ ತಂತಿಗಳು ವಾಹನಗಳ ಸುರಕ್ಷತೆಗೂ ಸಂಚಕಾರ ತರುವ ಹಾಗಿದೆ. ಆದರೂ ನಗರಸಭೆ ಈ ಕಡೆ ಗಮನ ಹರಿಸದಿರುವುದು ಶೋಚ­ನೀಯ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT