ADVERTISEMENT

ವಿದ್ಯುತ್ ಸಮಸ್ಯೆ: ಪಂಜಿನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 6:55 IST
Last Updated 11 ಜುಲೈ 2012, 6:55 IST

ಕೋಲಾರ: ವಿದ್ಯುತ್ ಅಸಮರ್ಪಕ ಪೂರೈಕೆ ಮಾಡುತ್ತಿರುವ ಬೆಸ್ಕಾಂ ಕಾರ್ಯವೈಖರಿ ಬದಲಾಗಬೇಕು ಎಂದು ಆಗ್ರಹಿಸಿ ರೈತ ಸಂಘ-ಹಸಿರು ಸೇನೆ ತಾಲ್ಲೂಕು ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.

ನಗರದ ಗಾಂಧಿವನದಿಂದ ಗಾಂಧಿ ಚೌಕದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೊಳವೆಬಾವಿಗಳನ್ನೇ ಆಧರಿಸಿರುವ ರೈತರಿಗೆ ವಿದ್ಯುತ್ ಅತ್ಯಗತ್ಯ. ಆದರೆ ವಿದ್ಯುತ್ ಪೂರೈಸುವಲ್ಲಿ ರೈತರ ಜೀವನದೊಂದಿಗೆ ಬೆಸ್ಕಾಂ ಚೆಲ್ಲಾಟವಾಡುತ್ತಿದೆ. ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಪರಿಪಾಠ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಯಮದಂತೆ ಆರು ಗಂಟೆ ಮೂರು ಫೇಸ್ ವಿದ್ಯುತ್ ಹಾಗೂ 11 ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕಾದ ಬೆಸ್ಕಾಂ ಮೂರು ಗಂಟೆ ಮೂರು ಫೇಸ್ ವಿದ್ಯುತ್ ಹಾಗೂ ನಾಲ್ಕು ಗಂಟೆ  ಸಿಂಗಲ್ ಫೇಸ್ ವಿದ್ಯುತ್ ಪೂರೈಸುತ್ತಿರುವುದು ಜನವಿರೋಧಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾರಾಯಣಗೌಡ, ಆದಿಮ ನಾಗರಾಜ್,  ಮುನೇಗೌಡ, ಧನಮಟ್ನಹಳ್ಳಿ ಗೋಪಾಲ್ ಹರಿನಾಥ, ಬಿ.ಕೆ.ಸುರೇಶ್, ಈಕಂಬಹಳ್ಳಿ ಮಂಜುನಾಥ, ಗದ್ದೆ ಕಣ್ಣೂರು ಮುರಳಿಕೃಷ್ಣ, ಶಶಿಕುಮಾರ್, ಸಿ.ಕೃಷ್ಣಪ್ಪ, ವೆಂಕಟಪತಿ, ಅಬ್ಬಣಿ ನಾರಾಯಣಿ, ನಾಗರಾಜ್, ಹರೀಶ್, ಮತ್ತು ಜಿಲ್ಲಾ ಸಂಚಾಲಕರಾದ ಕೆ.ಶ್ರೀನಿವಾಸಗೌಡ, ಹರಿಕುಮಾರ್ ವೆಂಕಟಸ್ವಾಮಿಗೌಡ, ಕೂಟೇರಿ ನಾಗರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.