ADVERTISEMENT

ವಿವಿಧ ಸೌಲಭ್ಯ ಪಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 5:25 IST
Last Updated 17 ಫೆಬ್ರುವರಿ 2012, 5:25 IST

ಶ್ರೀನಿವಾಸಪುರ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಕಾರ ಸಂಘಗಳಿಗೆ ಹಾಲನ್ನು ಪೂರೈಸುವುದರ ಮೂಲಕ ಒಕ್ಕೂಟದಿಂದ ದೊರೆಯುವ ವಿವಿಧ ಸೌಲಭ್ಯ ಪಡೆಯಬೇಕು ಎಂದು ಒಕ್ಕೂಟದ ನಿರ್ದೇಶಕ ಸಿ.ಮುನಿವೆಂಕಟಪ್ಪ ಸಲಹೆ ಮಾಡಿದರು.

ಪಟ್ಟಣದ ಕೋಲಾರ ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿ, ಒಕ್ಕೂಟ ಹಾಗೂ ರೈತರ ಹಿತದೃಷ್ಟಿಯಿಂದ ಖಾಸಗಿ ಡೇರಿಗಳಿಗೆ ಹಾಲು ನೀಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನಲ್ಲಿ 2500 ಹಸುಗಳಿಗೆ ಜೀವವಿಮೆ ಮಾಡಿಸಲಾತ್ತು. ಆ ಪೈಕಿ 29 ಹಸುಗಳು ಬೇರೆ ಬೇರೆ ಕಾರಣಗಳಿಂದ ಸತ್ತಿವೆ. ಹಸು ಕಳೆದುಕೊಂಡ ರೈತರಿಗೆ ತಲಾ ರೂ. 35,000,  ಹಾಲು ಉತ್ಪಾದಕರ ಕ್ಷೇಮಾಭಿವದ್ಧಿ ದತ್ತಿನಿಧಿಯಿಂದ 58 ಫಲಾನುಭವಿಗಳಿಗೆ ತಲಾ 5 ಸಾವಿರ, 8 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದು ಹೇಳಿದರು.

ಅಕಾಲಿಕ ಮರಣ ಹೊಂದಿದ ಹಾಲು ಉತ್ಪಾದಕರ ಸಂಘದ ಸದಸ್ಯರ ಕುಟುಂಬಗಳಿಗೆ ಪರಿಹಾರ ಧನ ವಿತರಿಸಲಾಯಿತು.

ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವುದರಿಂದ ಸಂಘಗಳಿಗೆ ಲಾಭ ಬರುತ್ತದೆ. ಲಾಭದಿಂದ ಇಂತಹ ಹತ್ತಾರು ಯೋಜನೆಗಳ ಮೂಲಕ ರೈತರಿಗೆ ನೆರವು ನೀಡಲು ಅನುಕೂಲವಾಗುತ್ತದೆ. ಸ್ಥಳೀಯ ಸಂಘಗಳಲ್ಲಿ ಯಾವುದೇ ಸಮಸ್ಯೆ ಬಂದರೂ ಶಿಬಿರ ಕಚೇರಿಗೆ ಮಾಹಿತಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.

ವಿಸ್ತರಣಾಧಿಕಾರಿ ಆರ್.ರಾಜ್‌ಕುಮಾರ್ ಸ್ವಾಗತಿಸಿದರು. ಕೆ.ಎಸ್.ನರಸಿಂಹಯ್ಯ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ.ಶ್ರೀನಿವಾಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.