ಕೋಲಾರ: ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರುವ ಮನಸ್ಸು ಸರ್ಕಾರಕ್ಕೆ ಇದ್ದರೆ ಪರಮಶಿವಯ್ಯ ವರದಿಯನ್ನೇ ಜಾರಿಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಡಾ.ಮಧು ಸೀತಪ್ಪ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಪರಮಶಿವಯ್ಯ ವರದಿ ವೈಜ್ಞಾನಿಕವಾಗಿದೆ. ನೇತ್ರಾವತಿ ನದಿಯ ಆಸುಪಾಸಿನ ಹಳ್ಳಕೊಳ್ಳಗಳಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಬಯಲು ಸೀಮೆಗೆ ತರುವ ಯೋಜನೆ ಶಾಶ್ವತವಾಗಿರುತ್ತದೆ. ಈ ಯೋಜನೆ ಬಿಟ್ಟರೆ ಮತ್ಯಾವುದೇ ಯೋಜನೆ ಬಯಲು ಸೀಮೆಯ ಜನರ ನೀರಿನ ಹಾಹಾಕಾರವನ್ನು ಇಂಗಿಸುವುದಿಲ್ಲ ಎಂದರು
ಎತ್ತಿನಹೊಳೆ ಯೋಜನೆಯಿಂದ 23 ಟಿಎಂಸಿ ನೀರು ತರಬಹುದು ಎಂಬ ವಾದ ಕೇಳಿ ಬರುತ್ತಿದೆ. ಅದರಲ್ಲಿ 6 ಟಿಎಂಸಿ ನೀರು ಸಿಗುವುದೂ ಅನುಮಾನ. ಅಲ್ಲದೆ ಅದು ಶಾಶ್ವತವಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂಬ ವಿಶ್ವಾಸವೂ ಇಲ್ಲ ಎಂದರು.
ಶಾಶ್ವತ ಕುಡಿಯುವ ನೀರಿಗಾಗಿ ಈಗಾಗಲೇ ಹೋರಾಟಗಳು ಪ್ರಾರಂಭವಾಗಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು. ಜಿಲ್ಲೆಯಲ್ಲಿ ಸಂಘಟಿತ ಹೋರಾಟ ನಡೆಯುತ್ತಿದ್ದರೂ ಕೆಜಿಎಫ್ ಮತ್ತು ಬಂಗಾರಪೇಟೆ ಜನತೆ ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಅವೆರಡೂ ಸ್ಥಳಗಳು ನಮ್ಮ ಜಿಲ್ಲೆಯಲ್ಲಿ ಇದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಮಧು ಸೀತಪ್ಪ ವಿಷಾದ ವ್ಯಕ್ತಪಡಿಸಿದರು.
ಮುಖಂಡರಾದ ತ್ಯಾಗರಾಜ್, ಮಳ್ಳೂರು ಶಿವಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.