ADVERTISEMENT

ಶಾಶ್ವತ ನೀರಾವರಿ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 4:30 IST
Last Updated 20 ಅಕ್ಟೋಬರ್ 2012, 4:30 IST

ಕೋಲಾರ: ಬಿಎಸ್‌ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಶ್ರೀರಾಮುಲು ಭರವಸೆ ನೀಡಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಎಸ್‌ಆರ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೆ ಅಧಿಕಾರದಲ್ಲಿದ್ದ ಯಾವ ಪಕ್ಷವೂ ಈ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವಲ್ಲಿ ಬದ್ಧತೆಯನ್ನಾಗಲೀ, ಆಸಕ್ತಿಯನ್ನಾಗಲೀ, ಕಾಳಜಿಯನ್ನಾಗಲೀ ತೋರದಿರುವುದು ವಿಷಾದನೀಯ ಎಂದರು.

ರಾಜ್ಯದ ಸಮಗ್ರ ಅಭಿವೃದ್ಧಿಯೇ ಪಕ್ಷದ ಮುಖ್ಯ ಗುರಿ. ಹೀಗಾಗಿ ವಿಧಾನಸಭೆಯ ಎಲ್ಲ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಈಗಾಗಲೇ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಚುನಾವಣೆ ವೇಳೆಗೆ ಪಕ್ಷ ಬಲಿಷ್ಠಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಳೆ: ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡಕವಿದ ವಾತಾವರಣವಿದ್ದು, ಕಾರ್ಯಕ್ರಮ ಶುರುವಾಗುವ ವೇಳೆಗೆ ತುಂತುರು ಹನಿ ಬೀಳತೊಡಗಿತ್ತು. ಶ್ರೀರಾಮುಲು ಭಾಷಣ ಆರಂಭಿಸುತ್ತಿದ್ದಂತೆಯೇ ಮಳೆ ಜೋರಾಗತೊಡಗಿತು.
ಆರಂಭದಲ್ಲಿ ಶ್ರೀರಾಮುಲು ಅವರೊಬ್ಬರಿಗೆ ಸಹಾಯಕರು ಕೊಡೆ ಹಿಡಿದರು. ವೇದಿಕೆಯಲ್ಲಿದ್ದ ಇತರೆ ಗಣ್ಯರು ಕುಳಿತು ಭಾಷಣ ಕೇಳುತ್ತಿದ್ದರು. ಮಳೆ ಹೆಚ್ಚಾಗಿ ಪೆಂಡಾಲ್ ಸೋರ ತೊಡಗಿದಂತೆ ಎಲ್ಲರೂ ಎದ್ದುನಿಂತು ಕೊಡೆಗಳ ಆಶ್ರಯ ಪಡೆದರು. ಕಾರ್ಯಕರ್ತರು ತಾವು ಕುಳಿತಿದ್ದ ಕುರ್ಚಿಗಳನ್ನೇ ತಲೆ ಮೇಲೆ ಹಿಡಿದುಕೊಂಡು ನಿಂತರು. ಮಳೆ ಪರಿಣಾಮ ಕೆಲ ನಿಮಿಷಗಳಲ್ಲಿ ಕಾರ್ಯಕ್ರಮ ಕೊನೆಗೊಂಡಿತು.

ಡಾ.ಸಿ.ಎಸ್.ದ್ವಾರಕಾನಾಥ್, ರಕ್ಷಿತಾ ಮಾತನಾಡಿದರು. ಜಿ.ಪಂ ಸದಸ್ಯ ಎಂ.ಎಸ್.ಆನಂದ್, ಆಂಜಿನಪ್ಪ, ಮುನಿಯಪ್ಪ, ಬಾಲಗೋವಿಂದ, ವೆಂಕಟರಾಂ, ಶಿವಾನಂದ್ ವೇದಿಕೆಯಲ್ಲಿದ್ದರು.

ರಾಜಕೀಯ ಧೃವೀಕರಣಕ್ಕೆ ಚಾಲನೆ
ಮುಳಬಾಗಲು: ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆರಂಭವಾಗಿದ್ದು, ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಲು ಬಿಎಸ್‌ಆರ್ ಪಕ್ಷದ ಮುಖಂಡ ಶ್ರೀರಾಮುಲು ಮನವಿ ಮಾಡಿದರು.

ಪಟ್ಟಣದ ಸೌಂದರ್ಯ ಪ್ಯಾರಡೈಸ್ ಸರ್ಕಲ್ ಬಳಿ  ಶುಕ್ರವಾರ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ರಾಜ್ಯಕ್ಕೆ ನೀಡಿದ ಕೊಡುಗೆ ಶೂನ್ಯ. ಪ್ರಾದೇಶಿಕ ಪಕ್ಷ ಬೆಂಬಲಿಸಿ, ಅಭಿವೃದ್ಧಿಗೆ ಮುನ್ನುಡಿ ಬರೆಯಿರಿ ಎಂದರು.

ಸಿ.ಎಸ್.ದ್ವಾರಕನಾಥ್, ರವೀಂದ್ರರೇಷ್ಮೆ, ಕಲೀದ್ ಅಹಮದ್, ರವೀಂದ್ರ, ಪ್ರಸಾದ್, ಮಂಜುನಾಥ್, ಲೋಕೇಶ್ ಇತರರು ಪಾಲ್ಗೊಂಡಿದ್ದರು. ಧಾರಾಕಾರ ಮಳೆ ನಡುವೆಯೂ ಜನರು ಒಂದೆಡೆ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.