ADVERTISEMENT

ಶ್ರೀನಿವಾಸಪುರ: ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 6:45 IST
Last Updated 18 ಜುಲೈ 2012, 6:45 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ತಡವಾಗಿ ಮಳೆಯಾಗಿದ್ದು, ಜಮೀನು ಉಳುಮೆ, ಹದಗೊಳಿಸುವಿಕೆ ಮತ್ತು ರಾಗಿ ಬಿತ್ತನೆ ಏಕಕಾಲದಲ್ಲಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಳೆ ತೇವಾಂಶ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮನೆ ಮಂದಿ ಬಿಡುವಿಲ್ಲದೆ ಹೊಲಗಳಲ್ಲಿ ದುಡಿಯುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಚೆದುರಿದಂತೆ ಮಳೆಯಾಗಿದೆ. ಕೆರೆ ಕುಂಟೆಗಳಿಗೆ ನೀರು ಹರಿದುಬರದಿದ್ದರೂ ಬಿತ್ತನೆಗೆ ಅಗತ್ಯವಿರುವಷ್ಟು ಮಳೆಯಾಗಿದೆ. ಆದರೆ ಮಾವಿನ ಸುಗ್ಗಿ ಈಗಷ್ಟೇ ಮುಗಿಯುತ್ತಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಜಮೀನು ಉಳುಮೆ ನಡೆದಿಲ್ಲ. ಹಾಗಾಗಿ ಇನ್ನೂ ಪೂರ್ಣ ಪ್ರಮಾಣದ ಬಿತ್ತನೆ ಸಾಧ್ಯವಾಗಿಲ್ಲ.

ತಾಲ್ಲೂಕಿನಾದ್ಯಂತ ಒಂದೇ ಸಲ ಕೃಷಿ ಚಟುವಟಿಕೆ ಆರಂಭಗೊಂಡಿರುವುದರಿಂದ ಎತ್ತನ್ನು ಹೊಂದಿರುವ ರೈತರು ಮಾತ್ರ ಸ್ವತಃ ನೇಗಿಲು ಉಳುಮೆ ಮಾಡುತ್ತಿದ್ದಾರೆ. ಆದರೆ ದುಡಿಯುವ ಎತ್ತುಗಳ ಕೊರತೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ರೈತರು ಟ್ರ್ಯಾಕ್ಟರ್ ಉಳುಮೆಯನ್ನು ನೆಚ್ಚಿಕೊಂಡಿದ್ದಾರೆ. ಹಾಗಾಗಿ ಬಾಡಿಗೆ ಟ್ರ್ಯಾಕ್ಟರ್‌ಗೆ ಬೇಡಿಕೆ ಉಂಟಾಗಿದೆ. ಅದರೊಂದಿಗೆ ಬಾಡಿಗೆಯನ್ನೂ ಹೆಚ್ಚಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ತಾಲ್ಲೂಕಿನ ಪ್ರಮುಖ ಆಹಾರದ ಬೆಳೆ ರಾಗಿಯಾದರೂ ಅದನ್ನು ಬೆಳೆಯಲು ಹಾಗೂ ನಿರ್ವಹಣೆಗೆ ಹೆಚ್ಚು ಖರ್ಚು ತಗಲುವುದರಿಂದ ರಾಗಿ ಬಿತ್ತುವ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಅವರೆ, ತೊಗರಿ ಹಾಗೂ ನೆಲಗಡಲೆ ಬಿತ್ತನೆಗೆ ಆದ್ಯತೆ ನೀಡಲಾಗಿದೆ. ಕೃಷಿ ಇಲಾಖೆ ಕಚೇರಿ ಹಾಗೂ ರೈತ ಕೇಂದ್ರಗಳಿಂದ ಬಿತ್ತನೆ ಬೀಜ ಖರೀದಿ ಕಳೆದ ಎರಡು ದಿನಗಳಿಂದ ಹೆಚ್ಚಿದೆ. ರೈತರು ಸಾಲಿನಲ್ಲಿ ನಿಂತು ತಮಗೆ ಅಗತ್ಯವಾದ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ಖರೀದಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರದ ಖರೀದಿಯೂ ಹೆಚ್ಚಿದೆ.

ಈ ಮಧ್ಯೆ ಮಾವಿನ ಸಸಿಗಳ ನಾಟಿ ಚುರುಕುಗೊಂಡಿದೆ. ಪಟ್ಟಣ ಮತ್ತು ಹೊರ ವಲಯದಲ್ಲಿನ ಸಸಿ ಮಾರಾಟ ಮಳಿಗೆಗಳಿಂದ ಕಳೆದ ಎರಡು ದಿನಗಳಿಂದ ಸಾವಿರಾರು ಸಸಿಗಳನ್ನು ಖರೀದಿಸಿ ಕೊಂಡೊಯ್ಯಲಾಗುತ್ತಿದೆ. ಕೆಲವು ರೈತರು ಈ ಮಳೆಯ ತೇವಾಂಶವನ್ನು ಬಳಸಿಕೊಂಡು ಸಸಿ ನಾಟಿ ಮಾಡುವ ಧಾವಂತದಲ್ಲಿದ್ದಾರೆ. ಇಷ್ಟರ ನಡುವೆ ಕೃಷಿ ಕಾರ್ಮಿಕರ ಕೊರತೆ ಕಂಡುಬಂದಿದೆ. ಬಹುತೇಕ ಕೃಷಿ ಕಾರ್ಮಿಕರು ಸ್ವಂತ ಕೆಲಸಗಳಲ್ಲಿ ನಿರತರಾಗಿರುವುದರಿಂದ ಈ ಪರಿಸ್ಥಿತಿ ಏರ್ಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.