ADVERTISEMENT

ಸಂಕಷ್ಟದಲ್ಲಿ ಬಾಲ ಕಾರ್ಮಿಕರ ವಸತಿ ಶಾಲೆಗಳು

ಕೆ.ನರಸಿಂಹ ಮೂರ್ತಿ
Published 2 ಆಗಸ್ಟ್ 2012, 3:30 IST
Last Updated 2 ಆಗಸ್ಟ್ 2012, 3:30 IST
ಸಂಕಷ್ಟದಲ್ಲಿ ಬಾಲ ಕಾರ್ಮಿಕರ ವಸತಿ ಶಾಲೆಗಳು
ಸಂಕಷ್ಟದಲ್ಲಿ ಬಾಲ ಕಾರ್ಮಿಕರ ವಸತಿ ಶಾಲೆಗಳು   

ಕೋಲಾರ: 5 ತಿಂಗಳಿಂದ ಅನುದಾನವಿಲ್ಲ. ಪಠ್ಯಪುಸ್ತಕಗಳ ಪೂರೈಕೆ ಆಗಿಲ್ಲ. ಮಕ್ಕಳಿಗೆ ಊಟ ನೀಡಲು ಹಣವಿಲ್ಲ. ಶಿಕ್ಷಕರ ಸಂಬಳಕ್ಕೂ ತತ್ವಾರ, ಶಾಲಾ ಕಟ್ಟಡದ ಬಾಡಿಗೆ ಹಣಕ್ಕೂ ಕೊರತೆ... -ಇದು ಜಿಲ್ಲೆಯಲ್ಲಿರುವ ಬಾಲ ಕಾರ್ಮಿಕರ ಹತ್ತು ವಸತಿ ಶಾಲೆಗಳ ಸದ್ಯದ ಶೋಚನೀಯ ಸ್ಥಿತಿ. ಈ ಸ್ಥಿತಿಯಲ್ಲಿ ಮುಂದುವರಿಯಲಾಗದೆ ಶ್ರೀನಿವಾಸಪುರ ತಾಲ್ಲೂಕಿನ ಎರಡು ಶಾಲೆಗಳು ಸ್ಥಗಿತಗೊಂಡಿವೆ. ಅಲ್ಲಿದ್ದ ಮಕ್ಕಳ ಗತಿ ಏನಾಯಿತು ಎಂಬುದಕ್ಕೂ ಸ್ಪಷ್ಟ ಉತ್ತರವಿಲ್ಲ.

ಕಾರ್ಮಿಕ ಇಲಾಖೆಯ ರಾಷ್ಟ್ರೀಯ ಬಾಲಕಾರ್ಮಿಕ ಪದ್ಧತಿ ಯೋಜನೆಗಳ (ಎನ್‌ಸಿಎಲ್‌ಪಿ- ನ್ಯಾಷನಲ್ ಚೈಲ್ಡ್ ಲೇಬರ್ ಪ್ರಾಜೆಕ್ಟ್ಸ್) ಅಡಿಯಲ್ಲಿ ಕಾರ್ಯನಿರ್ವಹಿಸುವ ಬಾಲಕಾರ್ಮಿಕರ ನೇಮಕಾತಿ ನಿರ್ಮೂಲನಾ ಪ್ರಚಾರ ಸಂಘದ ನೇತೃತ್ವದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುತ್ತಿರುವ ಶಾಲೆಗಳು ಅನುದಾನವಿಲ್ಲದೆ ಬಳಲುತ್ತಿವೆ. ಇದುವರೆಗೂ ಅನುದಾನ ಬಿಡುಗಡೆಯಾಗದಿರಲು ಕಾರಣವೇನು ಎಂಬ ಬಗ್ಗೆಯೂ ಸಂಸ್ಥೆಗಳಿಗೆ ಸ್ಪಷ್ಟ ಉತ್ತರ ದೊರಕಿಲ್ಲ.

10 ಶಾಲೆ: ಎನ್‌ಸಿಎಲ್‌ಪಿ ಯೋಜನೆ ಅಡಿ ಜಿಲ್ಲೆಗೆ ಬಾಲ ಕಾರ್ಮಿಕರ 25 ವಸತಿ ಶಾಲೆಗಳು ಮಂಜೂರಾಗಿವೆ. ಸದ್ಯಕ್ಕೆ 10 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಸೇರಿದಂತೆ ಎರಡು ಶಾಲೆ, ಮುಳಬಾಗಲು ಪಟ್ಟಣ, ಮುಳಬಾಗಲು ತಾಲ್ಲೂಕಿನ ನಂಗಲಿ, ಬಂಗಾರಪೇಟೆಯ ಕಾಮಸಮುದ್ರದ ಶಾಲೆ, ಮಾಲೂರು ಪಟ್ಟಣದಲ್ಲಿ ಎರಡು, ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ, ಕೋಲಾರದ ಬ್ರಾಹ್ಮಣರ ಬೀದಿಯಲ್ಲಿರುವ ಶಾಲೆ, ಕೆಜಿಎಫ್‌ನ ಶಾಲೆ ಸೇರಿ 10 ಶಾಲೆಗಳು ಬಾಲಕಾರ್ಮಿಕರಿಗೆಂದೇ ಇವೆ.
 
ಪ್ರತಿ ಶಾಲೆಯಲ್ಲೂ 50 ಮಕ್ಕಳಿಗೆ ಕಲಿಯಲು ಅವಕಾಶವಿದೆ.  ಶ್ರೀನಿವಾಸಪುರ ತಾಲ್ಲೂಕಿನ ಎರಡು ಶಾಲೆಗಳು ನಡೆಯುತ್ತಿಲ್ಲವಾದ್ದರಿಂದ ಸದ್ಯಕ್ಕೆ 400 ವಿದ್ಯಾರ್ಥಿಗಳು ಶಾಲೆಗಳಲ್ಲಿದ್ದಾರೆ ಎಂದು ಸಂಘದ ಜಿಲ್ಲಾ ಕ್ಷೇತ್ರಾಧಿಕಾರಿ ಎಂ.ಸರ್ವೇಶ್‌ಕುಮಾರ್ ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.

ಜಿಲ್ಲೆಯ ಸುತ್ತಮುತ್ತ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರನ್ನು ಗುರುತಿಸಿ ಶಾಲೆಗೆ ಕರೆತಂದು 1ರಿಂದ 7ನೇ ತರಗತಿವರೆಗೆ ಶಿಕ್ಷಣ ಕೊಡುವ ಈ ವ್ಯವಸ್ಥೆಗೆ ಕಳೆ 5 ತಿಂಗಳಿಂದ ಸಂಕಟ ಎದುರಾಗಿದೆ. ಪ್ರತಿ ಶಾಲೆಯನ್ನು ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತವೆ. ಕಟ್ಟಡ ಬಾಡಿಗೆ ರೂ 5 ಸಾವಿರ, ಪ್ರತಿ ಶಿಕ್ಷಕರ ವೇತನ ರೂ 4.5 ಸಾವಿರ, ಪ್ರತಿ ಮಗುವಿನ ಮಾಸಿಕ ಊಟದ ಖರ್ಚು ರೂ 800 ಎಂದು ಇಲಾಖೆ ನಿಗದಿ ಮಾಡಿದೆ. ಆದರೆ ಈ ಹಣವನ್ನು ನಾಲ್ಕು ತಿಂಗಳಿಂದ ನೀಡಿಲ್ಲ.

ಹಣ ಬಿಡುಗಡೆಯಾಗದೇ ಇರುವ ಹಿನ್ನೆಲೆಯಲ್ಲಿ ಶಾಲೆಯನ್ನು ನಡೆಸುವುದು ಸಾಧ್ಯವಿಲ್ಲ ಎಂದು ಸ್ವಯಂಸೇವಾ ಸಂಸ್ಥೆಗಳು ಹಿಂದೆ ಸರಿದಿವೆ. ಹೀಗಾಗಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಎರಡು ಶಾಲೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸರ್ವೇಶ್‌ಕುಮಾರ್ ತಿಳಿಸಿದರು.

ಪುಸ್ತಕವಿಲ್ಲ: ಶಾಲೆ ಶುರುವಾಗಿ ಎರಡು ತಿಂಗಳಾದರೂ 1ರಿಂದ 4ನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ಮಾತ್ರ ಶಿಕ್ಷಣ ಇಲಾಖೆ ಪೂರೈಸಿದೆ.

4ನೇ ತರಗತಿಯ ಕೆಲವು ಪಠ್ಯಪುಸ್ತಗಳಿಲ್ಲ. 5ರಿಂದ 7ನೇ ತರಗತಿಯ ಪುಸ್ತಕಗಳನ್ನು ಇನ್ನೂ ಪೂರೈಸಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ ಎಂಬುದು ನಗರದ ಬ್ರಾಹ್ಮಣರ ಬೀದಿಯಲ್ಲಿ ಶಾಲೆಯನ್ನು ನಡೆಸುತ್ತಿರುವ ಸರಸ್ವತಿ ಮಹಿಳಾ ಮಂಡಳಿಯ ಮುಖ್ಯಸ್ಥರಾದ ಸರಸ್ವತಮ್ಮ ಅವರ ನುಡಿ.

ಪುಸ್ತಕಗಳಿಲ್ಲದಿದ್ದರೂ ಪಾಠವನ್ನು ನಿಭಾಯಿಸಬಹುದು. ಆದರೆ ಕಟ್ಟಡ ಬಾಡಿಗೆ, ಮಕ್ಕಳಿಗೆ ಊಟ, ಶಿಕ್ಷಕರಿಗೆ ವೇತನ ನೀಡುವುದು ಕಷ್ಟವಾಗಿದೆ. ಐದು ತಿಂಗಳಿಂದ ಇಲಾಖೆ ಅನುದಾನವನ್ನೇ ನೀಡಿಲ್ಲ. ಅದಕ್ಕೆ ಕಾರಣಗಳೂ ಗೊತ್ತಾಗಿಲ್ಲ. ಹಾಗೆಂದು ಶಾಲೆಯನ್ನು ಮುಚ್ಚಿದರೆ ಬಡ ಬಾಲಕಾರ್ಮಿಕರ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಏಕೈಕ ಕಾರಣಕ್ಕೆ ಕಷ್ಟಪಟ್ಟು ಶಾಲೆಯನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಅವರು.

ಅನುದಾನ ಮುಂದಿನ ದಿನಗಳಲ್ಲಿ ಬಂದೇ ಬರುತ್ತದೆ ಎಂಬ ಖಾತ್ರಿ ಇದೆ. ಆದರೆ ಮಕ್ಕಳ ಹಿತದೃಷ್ಟಿಯಿಂದ ಬೇಗ ಬಿಡುಗಡೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ. ಶಾಲೆಗೆ ಸೇರಿಸುವಾಗಲೇ ಅನುಮಾನ ಮತ್ತು ಹಿಂಜರಿಕೆಯನ್ನು ತೋರುವ ಬಡ ಪೋಷಕರಲ್ಲಿ ಉತ್ಸಾಹ ತುಂಬಲು ಶಾಲೆಗಳು ಉತ್ತಮ ಸ್ಥಿತಿಯಲ್ಲಿರುವುದು ಅಗತ್ಯ. ಆ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಕೋರಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.