ಕೋಲಾರ: ಸರ್ಕಾರಿ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತ ಕಾಣುತ್ತಿರುವ ಕುರಿತು ನಗರದ ತಾಲ್ಲೂಕು ಪಂಚಾಯಿತಿಯಲ್ಲಿ ಈಚೆಗೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆತಂಕ ವ್ಯಕ್ತವಾಯಿತು.ಸಭೆಯ ಆರಂಭದಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ವಿವರ ನೀಡುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಅವರನ್ನು ಮಧ್ಯದಲ್ಲೆ ತಡೆದ ನಾಮನಿರ್ದೇಶಿತ ಸದಸ್ಯರಾದ ಮುದ್ದೇಗೌಡ, ಶಿವಕುಮಾರ್, ಸೈಯದ್ ಅಶ್ರಂ ಮತ್ತು ಹನುಮಪ್ಪ, ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಬಾರದಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ನಾಗರಾಜಗೌಡ, ಸರ್ಕಾರಿ ಶಾಲೆಯಲ್ಲಿ ದೊರಕುವ ಸೌಲಭ್ಯಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಬೇಕಾಗಿದೆ. ಅರಿವು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.ಅದನ್ನು ಒಪ್ಪದ ಸದಸ್ಯರು, ಸರ್ಕಾರಿ ಶಾಲೆಗಳ ಶಿಕ್ಷಕರು ನಿಯಮಿತವಾಗಿ ಪಾಠ ಮಾಡದೆ ರಾಜಕಾರಣಿಗಳಂತೆ ವರ್ತಿಸುತ್ತಾ ಓಡಾಡುತ್ತಿದ್ದಾರೆ. ಸಾಕಷ್ಟು ಸಂಬಳ, ಸೌಲಭ್ಯ ಪಡೆದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಶಿಕ್ಷಣಾಧಿಕಾರಿಗಳ ಬಗ್ಗೆ ಹಲವು ಶಿಕ್ಷಕರಿಗೆ ಭಯವೇ ಇಲ್ಲದಂತಾಗಿದೆ. ಬ್ಲಾಕ್ ಮತ್ತು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳೂ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ಅಂಥ ಶಿಕ್ಷಕರ ಕುರಿತು ಸ್ಪಷ್ಟ ನಿದರ್ಶನಗಳನ್ನು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಾಜಗೌಡ ಭರವಸೆ ನೀಡಿದರು.ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ನಡೆಸಲಾಗುತ್ತಿದೆ. ರಾತ್ರಿ ಶಾಲೆಗಳನ್ನು ನಡೆಸಲಾಗುತ್ತಿದೆ. ತಾಲ್ಲೂಕಿನ 10-12 ಶಾಲೆಗಳಲ್ಲಿ ಈ ಬಾರಿ ಪೂರ್ಣ ಫಲಿತಾಂಶ ದೊರಕುವ ನಿರೀಕ್ಷೆ ಇದೆ ಎಂದರು.
ಸರ್ವಶಿಕ್ಷಣ ಅಭಿಯಾನ ಅಡಿಯಲ್ಲಿ ತಾಲ್ಲೂಕಿನ 84 ಶಾಲೆಗಳಲ್ಲಿ ಪ್ರಮುಖ ರಿಪೇರಿಗಾಗಿ 40.48 ಲಕ್ಷ ಬಿಡುಗಡೆಯಾಗಿದೆ. ಹೆಣ್ಣುಮಕ್ಕಳಿಗಾಗಿ 135 ಶೌಚಾಲಯ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಮಾ.31ರೊಳಗೆ ಪೂರ್ಣಗೊಳಿಸಲಾಗುವುದು. ತಲಾ ರೂ 3.75 ಲಕ್ಷದಂತೆ 13 ಕೊಠಡಿಗಳ ನಿರ್ಮಾಣಕ್ಕೆ ಹಣಬಿಡುಗಡೆಯಾಗಿದೆ ಎಂದು ತಿಳಿಸಿದರು. ಅಧ್ಯಕ್ಷೆ ಎನ್.ರಮಾದೇವಿ, ಉಪಾಧ್ಯಕ್ಷ ವಿ.ಮಂಜುನಾಥ ಮತ್ತು ಸಿಇಒ ಕೆ.ಎಸ್.ಭಟ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ಪೂಜೆ: ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಮೊದಲ ಬಾರಿಗೆ ಸಭೆ ನಡೆಯಲಿದ್ದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ವಿ.ಮಂಜುನಾಥ್ ತಮ್ಮ ಕೊಠಡಿ, ಟೇಬಲ್, ಕುರ್ಚಿಗೆ ವಿಶೇಷ ಪೂಜೆಯನ್ನು ಏರ್ಪಾಡು ಮಾಡಿದ್ದರು. ಪುರೋಹಿತರೊಬ್ಬರು ಬಂದು ಪೂಜೆ ನಡೆಸಿದರು. ಇದರಿಂದ 1ಗಂಟೆ ಕಾಲ ಸಭೆ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.