ADVERTISEMENT

ಸಾರ್ವಜನಿಕ ವೇದಿಕೆಯಲ್ಲೇ ಶಾಸಕರಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 9:03 IST
Last Updated 2 ಜುಲೈ 2017, 9:03 IST
ಶನಿವಾರ ನಡೆದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು
ಶನಿವಾರ ನಡೆದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು   

ಕೋಲಾರ: ‘ರಾಜ್ಯದ 1.30 ಕೋಟಿ ಕುಟುಂಬಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುವಂತೆ ಮಾಡುವುದು ಸರ್ಕಾರದ ಧ್ಯೇಯ. ಜಾತಿ ಬಲ ಅಥವಾ ದುಡ್ಡಿನ ಅಹಂನಿಂದ ನಾನು ಗೆದ್ದಿಲ್ಲ. ಬಡವರ ಕಷ್ಟ ನಿಮಗೇನು ಗೊತ್ತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಅವರು ಶಾಸಕ ವರ್ತೂರು ಪ್ರಕಾಶ್‌ರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ವರ್ತೂರು ಪ್ರಕಾಶ್‌, ‘ಡೆಂಗಿ ಬಂದರೆ ಕೋಲಾರದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಡಿ. ಬದಲಿಗೆ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಿ. ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಮೂರೇ ದಿನದಲ್ಲಿ ಶವವಾಗಿ ವಾಪಸ್‌ ಬರುತ್ತೀರಿ’ ಎಂಬ ಮಾತಿಗೆ ಪ್ರತಿಕ್ರಿಯಿಸಿದರು.

‘ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌. ನಿಜಲಿಂಗಪ್ಪ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸರ್ಕಾರ ವರ್ಷಕ್ಕೆ ₹ 1,022 ಕೋಟಿಯನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡುತ್ತಿದೆ. ಬಡವರಿಗೆ ಆರೋಗ್ಯ ಸೇವೆ ತಲುಪಿಸಲು ಸರ್ಕಾರ ಬದ್ಧವಾಗಿದೆ. ವಿಧಾನಸಭೆಗೆ ಹೋಗುವಾಗ ಮೆಟ್ಟಿಲು ಮುಟ್ಟಿ ನಮಸ್ಕರಿಸುತ್ತೇನೆ. ಜನರ ನೋವು ನಿಮಗೇನು ಗೊತ್ತು, ನಾನು ಬಡತನ ನೋಡಿದ್ದೇನೆ’ ಎಂದು ಸಭಿಕರ ಎದುರೇ ಶಾಸಕರ ವಿರುದ್ಧ ವೇದಿಕೆಯಲ್ಲೇ ವಾಗ್ದಾಳಿ ನಡೆಸಿದರು.

ADVERTISEMENT

‘ನೀವು ಸರ್ವಜ್ಞರಂತೆ ಮಾತನಾಡಬೇಡಿ, ಕ್ಯಾನ್ಸರ್ ಚಿಕಿತ್ಸೆಗಾಗಿ ನಮ್ಮ ಊರಿನ ಬಡ ಮುಸಲ್ಮಾನರೊಬ್ಬರು ₹ 57 ಲಕ್ಷ ಖರ್ಚು ಮಾಡಿರುವ ನಿದರ್ಶನವಿದೆ. ಇಂತಹ ಕಣ್ಣೀರ ಕಥೆಗಳು ನಮ್ಮ ಬಳಿ ಬರುತ್ತವೆ. ನಿಮಗೆ ಇಂತಹ ಸಂಕಷ್ಟಗಳು ಗೊತ್ತಾಗದೆ ಮಾತನಾಡುತ್ತೀರಿ’ ಎಂದು ಸಚಿವರು ವರ್ತೂರು ಪ್ರಕಾಶ್‌ ವಿರುದ್ಧ ಹರಿಹಾಯ್ದರು.

‘ವಿಮಾ ಯೋಜನೆಗಳಿಂದ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಸಾಧ್ಯವಿಲ್ಲ. ಸಹಕಾರಿ ಸಂಘಗಳ ಸದಸ್ಯರಿಗೆ ಇರುವ ಯಶಸ್ವಿನಿ ಯೋಜನೆಯಡಿ ಕೇವಲ ಶೇ 11ರಷ್ಟು ಮಂದಿ ಮಾತ್ರ ಆರೋಗ್ಯ ವಿಮೆ ಕಾರ್ಡ್ ಮಾಡಿಸಿದ್ದಾರೆ. ಉಳಿದ 89ರಷ್ಟು ಮಂದಿಯ ಗತಿಯೇನು’ ಎಂದು ಪ್ರಶ್ನಿಸಿದರು.

ಸ್ಪಂದಿಸುತ್ತಿಲ್ಲ: ‘ಚಿಕಿತ್ಸೆಗೆ ₹ 20 ಲಕ್ಷಕ್ಕಿಂತ ಹೆಚ್ಚು ಖರ್ಚಾಗುವ ಕಾಯಿಲೆ ಯಾವುದೂ ಇಲ್ಲ. ಪತ್ರಕರ್ತರ ಆರೋಗ್ಯ ಸೇವೆಗೆ ವರ್ಷಕ್ಕೆ ₹ 10 ಲಕ್ಷ ಮೀಸಲಿಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಡೆಂಗಿ ವ್ಯಾಪಕವಾಗಿದ್ದು, ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ವರ್ತೂರು ಪ್ರಕಾಶ್‌ ಮನವಿ ಮಾಡಿದರು.

‘ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದಕ್ಕೆ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗೆ ₹ 100 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಶಾಸಕರ ನಿಧಿಯಲ್ಲಿ ತಾಲ್ಲೂಕಿನ 15 ಸಾವಿರ ಮಕ್ಕಳಿಗೆ ₹ 290 ಮುಖಬೆಲೆಯ ಇಂಗ್ಲಿಷ್ ನಿಘಂಟು ವಿತರಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ರಾಜ್ಯದ ಶಾಸಕಾಂಗ ದೇಶಕ್ಕೆ ಮಾದರಿಯಾಗಿತ್ತು. ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸುವ ನಿರ್ಣಯ ಸರಿಯಲ್ಲ’ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು.

ಪತ್ರಕರ್ತರಿಗೆ ಸನ್ಮಾನ: ಪತ್ರಕರ್ತರಾದ ಬಿ.ಎನ್. ಮುರಳಿಪ್ರಸಾದ್, ವಿ. ಶ್ರೀಕಾಂತ್, ಕೆ. ರಮೇಶ್, ವೆಂಕಟೇಶ್, ಡಿ.ಎನ್. ಲಕ್ಷ್ಮೀಪತಿ, ಬಿ. ದೇವಾನಂದ್, ಎಂ. ರವಿಕುಮಾರ್, ಎನ್. ಶಿವಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಪದವಿ, ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಆರ್ಥಿಕ ನೆರವು ನೀಡಿ ಪುರಸ್ಕರಿಸಲಾಯಿತು.

ಜಿಲ್ಲಾಧಿಕಾರಿ ಕೆ.ವಿ. ತ್ರಿಲೋಕಚಂದ್ರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್‌. ರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ,  ಮುಖ್ಯಮಂತ್ರಿ ಮಾಧ್ಯಮ ಸಮನ್ವಯಕಾರ ಕೆ.ವಿ. ಪ್ರಭಾಕರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಪಾಲ್ಗೊಂಡಿದ್ದರು.

* * 

ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರ ಸ್ತಂಭವಾಗಿರುವ ಮಾಧ್ಯಮ ಕ್ಷೇತ್ರವು ಕಾವಲು ನಾಯಿಯಂತೆ ಕಾರ್ಯ ನಿರ್ವಹಿಸಬೇಕು
ಡಾ.ಕೆ.ವಿ. ತ್ರಿಲೋಕಚಂದ್ರ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.