ಕೋಲಾರ: ಭೂಗೋಳ, ಅದರ ಹಿನ್ನೆಲೆಯಲ್ಲಿ ಭುವನೇಶ್ವರಿ ಪ್ರತಿಮೆ, ತಲೆ ಮೇಲೆ ಪ್ರಖರ ಸೂರ್ಯನ ಬಿಂಬ, ಈ ಸ್ತಬ್ಧ ಚಿತ್ರದ ಸುತ್ತಲೂ ಭೂಮಿ ತತ್ವವನ್ನು ಪ್ರತಿಪಾದಿಸುವ ಕವಿ ಸಾಲುಗಳು...
–ಇದು ಫೆ.12 ಮತ್ತು 13ರಂದು ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನಡೆಯುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ವಿಶೇಷ. ಇನ್ನೂ ವಿಶೇಷ ಎಂದರೆ ಅಧ್ಯಕ್ಷ ಡಾ.ವಿ.ಚಂದ್ರಶೇಖರ ನಂಗಲಿ ಮೆರವಣಿಗೆ ವಾಹನದಲ್ಲಿ ಕುಳಿತು ಸಾಗದೆ ಮೆರವಣಿಗೆ ಮುಂಭಾಗದಲ್ಲಿ ಜನರೊಡನೆ ನಡೆದೇ ಸಾಗಲು ನಿರ್ಧರಿಸಿರುವುದು. ನಡಿಗೆಯೇ ಪೂಜೆ ಭೂಮಿ ತಾಯಿಗೆ ಎಂಬುದು ಅವರ ಮಾತು.
ಸಾಹಿತ್ಯ ಸಮ್ಮೇಳನದ ಮೆರವಣಿಗೆ ವಾಹನದಲ್ಲಿ ಸಾಲಂಕೃತವಾದ ಆಸನದಲ್ಲಿ ಸಮ್ಮೇಳನದ ಅಧ್ಯಕ್ಷರು ಮತ್ತು ಅವರ ಪತ್ನಿ ಕುಳಿತು ಸಾಗುವುದು ಸಾಮಾನ್ಯ ನಡೆವಳಿಕೆ. ಆದರೆ ಈ ಬಾರಿ ಸಮ್ಮೇಳನದಲ್ಲಿ ಅಧ್ಯಕ್ಷರು ಮೆರವಣಿಗೆ ವಾಹನದಲ್ಲಿ ಕುಳಿತುಕೊಳ್ಳದೇ, ಭೂಗೋಳ ಮತ್ತು ಭುವನೇಶ್ವರಿಗೆ (ಭೂಮಿ ತಾಯಿಯ ಸಂಸ್ಕೃತ ರೂಪ) ಆದ್ಯತೆ ನೀಡಿದ್ದಾರೆ. ತಮ್ಮ ಜೀವನ ಮತ್ತು ಸಾಹಿತ್ಯವನ್ನು ರೂಪಿಸಿದ ಭೂಮಿ ತತ್ವದ ಸಂದೇಶ ಸಮ್ಮೇಳನದ ಸಂದರ್ಭದಲ್ಲಿ ಸಮುದಾಯಕ್ಕೆ ರವಾನೆಯಾಗ-ಬೇಕು ಎಂಬುದು ಅಧ್ಯಕ್ಷರ ಇಚ್ಛೆ. ಹೀಗಾಗಿ ಸಮ್ಮೇಳನ ವ್ಯಕ್ತಿ ಕೇಂದ್ರಿತವಾಗದೇ ಭೂಮಿ ಮತ್ತು ಅದರ ಬಳಕೆದಾರವಾದ ಸಮುದಾಯ ಕೇಂದ್ರಿತವಾಗಿ ಗಮನ ಸೆಳೆಯಲಿದೆ.
ಮೆರವಣಿಗೆ ವಾಹನ ಪೀಠದ ಮೇಲೆ ಅದಕ್ಕಿಂತಲೂ ದೊಡ್ಡದಾದ ಭೂಗೋಳದ ಪ್ರತಿಕೃತಿ ಇರಲಿದೆ. ಪೀಠದ ಮುಂಭಾಗ ಜನಪದ ತ್ರಿಪದಿ- ‘ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ.. ಎಳ್ಳು ಜೀರಿಗೆ ಬೆಳೆಯೋಳ, ಎದ್ದೊಂದು ಗಳಿಗೆ ನೆನೆಯೋಣ’ ಎಂಬ ಸಾಲು. ಪೀಠದ ಮತ್ತೊಂದು ಬದಿಗೆ ಕೆ.ಎಸ್.ನರಸಿಂಹಸ್ವಾಮಿಯವರ ‘ಬಂದ ಬಾಗಿಲು ಮಣ್ಣು, ಬಿಡುವ ಬಾಗಿಲು ಮಣ್ಣು, ನಡುವೆ ಕಾಪಾಡುವುದು ತಾಯ ಕಣ್ಣು’ ಸಾಲುಗಳು, ಮೂರನೇ ಬದಿಯಲ್ಲಿ ‘ಸಮುದ್ರ ವಸನೇ ಪರ್ವತ ಸ್ತನ ಮಂಡಲೇ..ಕ್ಷಮಯಾ ಧರಿತ್ರಿ’ ಎಂಬ ಸಂಸ್ಕೃತ ಶ್ಲೋಕ-ದ ಕನ್ನಡ ರೂಪದ ಸಾಲುಗಳು ಎದ್ದು ಕಾಣಲಿವೆ.
ವಾಹನದ ಸುತ್ತಲೂ, ‘ಕೆರೆ ಕಟ್ಟೆ ಉಳಿಸಿ’, ‘ರಾಜಕಾಲುವೆ ಉಳಿಸಿ’. ‘ಮರಳು ಉಳಿಸಿ’. ‘ಗೋಕುಂಟೆ ಉಳಿಸಿ’ ಎಂಬ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಲಾಗುವುದು.
ಇಂಥದ್ದನ್ನು ಇದುವರೆಗೂ ಆಳ್ವಾಸ್ ನುಡಿಸಿರಿಯಲ್ಲಾಗಲೀ ಸಾಹಿತ್ಯ ಸಮ್ಮೇಳನದಲ್ಲಾಗಲೀ ಮಾಡಿಲ್ಲ. ಒಟ್ಟಾರೆ ಮೆರವಣಿಗೆ ಭೂಮಿ ತತ್ವದ ಪ್ರತೀಕವನ್ನು ಪ್ರತಿಬಿಂಬಿಸಲಿದೆ. ಅವರ ಕಲ್ಪನೆಗೆ ಕಿವಿ ಮತ್ತು -ಮನಸ್ಸು ಕೊಟ್ಟ ಕಲಾವಿದ ಕೆ.ವಿ.ಕಾಳಿದಾಸ್ ಸ್ತಬ್ಧ ಚಿತ್ರವನ್ನು ರೂಪಿಸುವ ಸಿದ್ಧತೆಯನ್ನು ಆರಂಭಿಸಿದ್ದಾರೆ.
ಸ್ಮರಣಿಕೆ: ಸಮ್ಮೇಳನದಲ್ಲಿ ಪಾಲ್ಗೊಳ್ಳುವ ವಿಷಯ ತಜ್ಞರು ಮತ್ತು ಗಣ್ಯರಿಗೆ ಭೂಮಿ ತತ್ವವನ್ನು ಆಧರಿಸಿದ ಸಮ್ಮೇಳನದ ಮೆರವಣಿಗೆಯ ಸ್ತಬ್ಧಚಿತ್ರವನ್ನೇ ಹೋಲುವ ಸ್ಮರಣಿಕೆಗಳನ್ನು ನೀಡಲು ಉದ್ದೇಶಿಸಿರುವುದು ವಿಶೇಷ.
ಇನ್ನಷ್ಟು ವಿಶೇಷ: ಸಮ್ಮೇಳನ ಸಾಂಪ್ರದಾಯಿಕ ಸ್ವರೂಪದ ಚೌಕಟ್ಟುಗಳನ್ನು ಮೀರಿ ಇನ್ನಷ್ಟು ವಿಶೇಷಗಳನ್ನು ಒಳಗೊಳ್ಳಲಿದೆ.
ಇದೇ ಮೊದಲ ಬಾರಿಗೆ ಮಕ್ಕಳ ಕವಿಗೋಷ್ಠಿಯೊಂದನ್ನು ಆಯೋಜಿಸಲಾಗುತ್ತಿದೆ. ವಿಜ್ಞಾನ ಮತ್ತು ಆಹಾರ ಕುರಿತ ಗೋಷ್ಠಿಗಳೂ ನಡೆಯಲಿವೆ. ಜಿಲ್ಲೆಯ ಮಟ್ಟಿಗೆ ಇದುವರೆಗಿನ ಸಮ್ಮೇಳನದಲ್ಲಿ ಕಾಣ ಕವಿ ---ಕಾವ್ಯ ಗಾಯನ ಕಾರ್ಯಕ್ರಮವನ್ನೂ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸರ್ವಜ್ಞನ ಸಾಹಿತ್ಯದಲ್ಲಿ ಆಹಾರ ಪರಿಕಲ್ಪನೆ ಕುರಿತು ಆಹಾರ ತಜ್ಞ ಡಾ.ರಾಜಶೇಖರ್ ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನ ಲೇಖಕರಾದ ನಾಗೇಶ ಹೆಗಡೆ, ಡಾ.ಶೈಲಜಾ ಕೂಡ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಐದು ದ್ವಾರ: ಸಮ್ಮೇಳನ ನಡೆಯುವ ಟಿ.ಚೆನ್ನಯ್ಯ ರಂಗಮಂದಿರದ ಸುತ್ತಮುತ್ತ ಜಿಲ್ಲೆಯ ಪ್ರಮುಖ ಲೇಖಕರ ಹೆಸರಿನಲ್ಲಿ ದ್ವಾರಗಳನ್ನು ನಿರ್ಮಿಸಲಾಗುವುದು. ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಉತ್ತನೂರು ರಾಜಮ್ಮ ವಿ ಶೆಟ್ಟಿ, ಸೋಮಶೇಖರಗೌಡ, ಡಾ.ಡಿ.ವಿ.ಗುಂಡಪ್ಪ ಹಾಗೂ ಬಂಗಾರಪೇಟೆಯಲ್ಲಿ ನಡೆದ ಮೊದಲ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅ.ನ.ಕೃಷ್ಣರಾಯರ ಹೆಸರಿನ ದ್ವಾರಗಳನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನೆರವು ದೊರಕಿಲ್ಲ: ಸುಮಾರು ₨ 12 ಲಕ್ಷ ಅಂದಾಜು ವೆಚ್ಚದಲ್ಲಿ ಸಮ್ಮೇಳನವನ್ನು ಸಂಘಟಿಸಲಾಗುತ್ತಿದೆ. ಪರಿಷತ್ ಕೇಂದ್ರ ಘಟಕ ಈ ಮುಂಚಿನಂತೆ ₨ 5 ಲಕ್ಷ ನೀಡುವ ಬದಲು ₨ 4.50 ಲಕ್ಷವನ್ನಷ್ಟೇ ನೀಡಿದೆ. ಕಳೆದ ಸಮ್ಮೇಳನದಲ್ಲಿ ಮಾಲೂರು ಪುರಸಭೆ ₨ 1 ಲಕ್ಷ ನೀಡಿತ್ತು. ಆದರೆ ಈ ಬಾರಿ ಜಿಲ್ಲಾಡಳಿತದಿಂದ ಇನ್ನೂ ನೆರವು ದೊರಕಿಲ್ಲ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.