ADVERTISEMENT

ಹನಿ ನೀರಾವರಿಯತ್ತ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:35 IST
Last Updated 16 ಫೆಬ್ರುವರಿ 2011, 10:35 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಅಂತರ್ಜಲದ ಪ್ರಮಾಣ ಕುಸಿದಂತೆ ರೈತರು ಹನಿ ನೀರಾವರಿ ಅಳವಡಿಸಲು ಮುಂದಾಗಿದ್ದಾರೆ. ಲಭ್ಯವಿರುವ ಕನಿಷ್ಠ ಪ್ರಮಾಣದ ನೀರನ್ನು ಬಳಸಿಕೊಂಡು ಗರಿಷ್ಟ ಪ್ರಮಾಣದಲ್ಲಿ ಬೆಳೆ ತೆಗೆಯಲು ಹವಣಿಸುತ್ತಿದ್ದಾರೆ.ಈ ಹಿಂದೆ ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರು ಬರುತ್ತಿತ್ತು. ಆಗ ಬೆಳೆಗೆ ಕಾಲುವೆ ಮೂಲಕ ಅಗತ್ಯಕ್ಕಿಂತ ಹೆಚ್ಚು ನೀರನ್ನು ಹರಿಸುತ್ತಿದ್ದರು. ಸಾಂಪ್ರದಾಯಿಕ ಪದ್ಧತಿಯಲ್ಲಿ, ಬಳಕೆಯಾಗುತ್ತಿದ್ದ ನೀರಿಗಿಂತ ಪೋಲಾಗುತ್ತಿದ್ದ ನೀರಿನ ಪ್ರಮಾಣವೇ ಹೆಚ್ಚಿತ್ತು. ಕೊಳವೆ ಬಾವಿಗಳ ಸಮೀಪ ನಿರ್ಮಿಸಲಾಗಿದ್ದ ಮಣ್ಣಿನ ತೊಟ್ಟಿಗಳಲ್ಲಿ ಹೆಚ್ಚು ಪ್ರಮಾಣದ ನೀರು ವ್ಯರ್ಥವಾಗುತ್ತಿತ್ತು. ಆದರೆ ಈಗ ಅದಕ್ಕೆ ಎಡೆ ಇಲ್ಲದಂತೆ ರೈತರು ಎಚ್ಚರ ವಹಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯಷ್ಟು ರೈತರು ಮಾತ್ರ ಅನುಸರಿಸುತ್ತಿದ್ದ ಹನಿ ನೀರಾವರಿ ಈಗ ಎಲ್ಲ ರೈತರ ಆದ್ಯತೆ ಆಗುತ್ತಿದೆ. ಸರ್ಕಾರದಿಂದ ಹನಿ ನೀರಾವರಿಗೆ ನೀಡಲಾಗುತ್ತಿರುವ ಸಹಾಯಧನ ಈ ಪದ್ಧತಿ ಅಳವಡಿಸಲು ಪೂರಕವಾಗಿದೆ. ಈ ಪದ್ಧತಿ ಲಾಭವನ್ನು ಕಂಡುಕೊಂಡ ಕೆಲವು ರೈತರು ಪ್ಲಾಸ್ಪಿಕ್ ಹಾಳೆ ಹೊದಿಕೆ ಕೆಳಗೆ ಹನಿ ನೀರಾವರಿ ಪೈಪ್ ಅಳವಡಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ನೀರನ್ನು ಬಳಸಿಕೊಳ್ಳುತ್ತಿದ್ದಾರೆ.ಕನಿಷ್ಠ ಕಳೆದ 20 ವರ್ಷಗಳಿಂದಲಾದರೂ ಸಾಮೂಹಿಕವಾಗಿ ಹನಿ ಹಾಗೂ ತುಂತುರು ನೀರಾವರಿ ಅಳವಡಿಸಿದ್ದರೆ ಅಂತರ್ಜಲಕ್ಕೆ ಈ ಗತಿ ಬರುತ್ತಿರಲಿಲ್ಲ ಎಂದು ರೈತರೇ ಹೇಳುತ್ತಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆಯಂತೆ ಈಗ ನೀರಿನ ಪರಿಣಾಮಕಾರಿ ಬಳಕೆಗೆ ಹೊಸ ಹೊಸ ಮಾರ್ಗ ಹುಡುಕಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.