ADVERTISEMENT

ಹಾಲು ಖರೀದಿ ದರ ಇಳಿಕೆ; ರೈತರಿಗೆ ಆಘಾತ

ಜೆ.ಆರ್.ಗಿರೀಶ್
Published 9 ಜೂನ್ 2017, 11:29 IST
Last Updated 9 ಜೂನ್ 2017, 11:29 IST
ಕೋಲಾರದಲ್ಲಿರುವ ಕೋಚಿಮುಲ್‌ ಆಡಳಿತ ಕಚೇರಿ ಕಟ್ಟಡ
ಕೋಲಾರದಲ್ಲಿರುವ ಕೋಚಿಮುಲ್‌ ಆಡಳಿತ ಕಚೇರಿ ಕಟ್ಟಡ   

ಕೋಲಾರ: ಹೈನುಗಾರಿಕೆಯೇ ಜೀವನಾಡಿಯಾಗಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ಗುರುವಾರದಿಂದ (ಜೂನ್‌ 8) ಹಾಲು ಖರೀದಿ ದರವನ್ನು ಲೀಟರ್‌ಗೆ ₹ 1 ಇಳಿಕೆ ಮಾಡಿ, ರೈತರಿಗೆ ಆಘಾತ ನೀಡಿದೆ.

ಬುಧವಾರದವರೆಗೆ (ಜೂನ್‌ 7) ಖರೀದಿ ದರ ಪ್ರತಿ ಲೀಟರ್‌ಗೆ ₹ 25 ಇತ್ತು. ದರ ಇಳಿಕೆ ನಂತರ ಪರಿಷ್ಕೃತ ದರ ಲೀಟರ್‌ಗೆ ₹ 24 ಆಗಿದೆ. ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ಒಕ್ಕೂಟದಲ್ಲಿ ಪ್ರತಿನಿತ್ಯ ಸುಮಾರು 10.70 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ.

ಅವಳಿ ಜಿಲ್ಲೆಗಳಲ್ಲಿ ಕಳೆದ ಒಂದು ದಶಕದಿಂದ ಬರ ಸ್ಥಿತಿ ಇದೆ. ಕೃಷಿ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ರೈತರು ಕೃಷಿ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದರು. ಹೈನುಗಾರಿಕೆಯು ಬಹುಪಾಲು ರೈತ ಕುಟುಂಬಗಳ ಬೆನ್ನೆಲುಬಾಗಿದೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ.

ADVERTISEMENT

ಒಕ್ಕೂಟದ ವ್ಯಾಪ್ತಿಯ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ 1,802 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, 2.79 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಕಳೆದ 20 ದಿನಗಳಿಂದ ಉತ್ತಮ ಮಳೆಯಾಗಿದೆ. ಎಲ್ಲೆಡೆ ಹಸಿರು ಮೇವು ಬಂದಿದೆ. ಹೀಗಾಗಿ ಜೂನ್‌ ಆರಂಭದಿಂದ ಹಾಲು ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಹಾಲು ಮಾರಾಟ: ಒಕ್ಕೂಟದಿಂದ ಬೆಂಗಳೂರಿನ ಮದರ್‌ ಡೇರಿಗೆ ಪ್ರತಿನಿತ್ಯ 1.80 ಲಕ್ಷ ಲೀಟರ್‌ ಮತ್ತು ಆಂಧ್ರಪ್ರದೇಶಕ್ಕೆ 90 ಸಾವಿರ ಲೀಟರ್‌ ಹಾಲು ಕಳುಹಿಸಲಾಗುತ್ತಿದೆ. 3.10 ಲಕ್ಷ ಲೀಟರ್‌ ಸ್ಯಾಚೆಟ್‌ ಹಾಲು, 2.72 ಲಕ್ಷ ಲೀಟರ್‌ ಗುಡ್‌ ಲೈಫ್‌ ಹಾಲು ಮಾರಾಟವಾಗುತ್ತಿದೆ. 28 ಸಾವಿರ ಲೀಟರ್‌ ಹಾಲು, ಮೊಸರು ಉತ್ಪಾದನೆಗೆ ಮತ್ತು 1.85 ಲಕ್ಷ ಲೀಟರ್‌ ಹಾಲಿನ ಪುಡಿ ತಯಾರಿಕೆಗೆ ಬಳಕೆಯಾಗುತ್ತಿದೆ.

ಎರಡು ಬಾರಿ ಹೆಚ್ಚಳ: ಈ ವರ್ಷದ ಆರಂಭದಲ್ಲಿ ಬರದಿಂದ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗಿ, ರೈತರು ರಾಸುಗಳನ್ನು ಹೊರ ರಾಜ್ಯಗಳಿಗೆ ಹಾಗೂ ಕಸಾಯಿಖಾನೆಗಳಿಗೆ ಮಾರುವ ಪರಿಸ್ಥಿತಿ ಇತ್ತು. ಮತ್ತೊಂದೆಡೆ ಹಸಿರು ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಕುಸಿದಿತ್ತು.

ಈ ಕಾರಣಕ್ಕೆ ಒಕ್ಕೂಟವು ರೈತರು ಹಾಗೂ ಹೈನೋದ್ಯಮದ ಹಿತದೃಷ್ಟಿಯಿಂದ ಜ.1ರಿಂದ ಅನ್ವಯವಾಗುವಂತೆ ಹಾಲು ಖರೀದಿ ದರವನ್ನು ಲೀಟರ್‌ಗೆ ₹ 21.70ರಿಂದ ₹ 23ಕ್ಕೆ ಹೆಚ್ಚಿಸಿತ್ತು. ಪ್ರತಿ ಲೀಟರ್‌ಗೆ ₹1.30 ಹೆಚ್ಚಳವಾಗಿತ್ತು.

ನಂತರ ಮಾರ್ಚ್‌ 8ರಲ್ಲಿ ಖರೀದಿ ದರವನ್ನು ₹ 23ರಿಂದ ₹ 25ಕ್ಕೆ ಹೆಚ್ಚಿಸಲಾಗಿತ್ತು. ಆಗಲೂ ಪ್ರತಿ ಲೀಟರ್‌ಗೆ ₹ 2 ಹೆಚ್ಚಳವಾಗಿತ್ತು. ಏಪ್ರಿಲ್‌ನಲ್ಲಿ ದಿನಕ್ಕೆ ಸರಾಸರಿ 8.70 ಲಕ್ಷ ಹಾಗೂ ಮೇ ತಿಂಗಳಲ್ಲಿ 9.70 ಲಕ್ಷ ಲೀಟರ್‌ ಹಾಲು ಸಂಗ್ರಹವಾಗಿತ್ತು.

ಹಾಲಿನ ಉತ್ಪಾದನೆ ಕುಸಿದಿದ್ದ ಕಾರಣ ಒಕ್ಕೂಟವು ₹ 25ರ ಖರೀದಿ ದರವನ್ನು ಮೇ ಅಂತ್ಯದವರೆಗೂ ಮುಂದುವರಿಸಿತ್ತು. ಆದರೆ, ಕಳೆದ 9 ದಿನಗಳಿಂದ ಹಾಲು ಸಂಗ್ರಹಣೆ ಪ್ರಮಾಣವು 10.50 ಲಕ್ಷ ಲೀಟರ್‌ ಗಡಿ ದಾಟಿದೆ. ಹೀಗಾಗಿ ಒಕ್ಕೂಟವು ಏಕಾಏಕಿ ಖರೀದಿ ದರ ಇಳಿಕೆ ಮಾಡಿದೆ.

ಅಂಕಿ ಅಂಶ
₹ 25 ಹಿಂದಿನ ದರ

₹ 24 ಪರಿಷ್ಕೃತ ದರ

₹ 1ದರ ಇಳಿಕೆ

* * 

ಬರದ ಕಾರಣಕ್ಕೆ ಹಾಲು ಖರೀದಿ ದರ ಹೆಚ್ಚಿಸಲಾಗಿತ್ತು. ಜಿಲ್ಲೆಯಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿದೆ. ಮೇವು, ನೀರಿನ ಸಮಸ್ಯೆ ದೂರವಾಗಿದೆ. ಹಾಲಿನ ಉತ್ಪಾದನೆ ಹೆಚ್ಚಿರುವುದರಿಂದ ಖರೀದಿ ದರ ಇಳಿಸಲಾಗಿದೆ
–ಎನ್‌.ಜಿ.ಬ್ಯಾಟಪ್ಪ, ಕೋಚಿಮುಲ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.