ಬಂಗಾರಪೇಟೆ: ಕೆರೆ ಪ್ರವೇಶಿಸಿದೊಡನೆಯೇ ದುರ್ವಾಸನೆ. ಹಳೆ ಕಟ್ಟಡಗಳ ಮಣ್ಣು, ಇಟ್ಟಿಗೆ ರಾಶಿ. ಕುಗ್ಗುತ್ತಿರುವ ಕೆರೆಯಂಗಳದ ವಿಸ್ತೀರ್ಣ, ದಟ್ಟವಾಗಿ ಬೆಳೆದಿರುವ ಮುಳ್ಳಿನ ಗಿಡ ಮರಗಳು....
–ಇದು ತಾಲ್ಲೂಕಿನ ಹುಲಿಬೆಲೆ ಪಂಚಾಯತಿ ವ್ಯಾಪ್ತಿಯ ಹುಣಸನಹಳ್ಳಿ ಕೆರೆಯ ಈಗಿನ ಚಿತ್ರಣ.
ಪಟ್ಟಣ ಹೊರವಲಯದ ಹುಣಸನಹಳ್ಳಿ ರೈಲ್ವೆ ಗೇಟ್ ಸಮೀಪಿಸುವ ಮುನ್ನವೇ ಕೆರೆಯಂಗಳದಿಂದ ಬರುವ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಕೋಳಿ ಅಂಗಡಿಗಳ ರೆಕ್ಕೆ, ಪುಕ್ಕ, ತ್ಯಾಜ್ಯವನ್ನು ಇಲ್ಲಿ ಸುರಿಯಲಾಗುತ್ತಿದೆ. ಸಮಾರಂಭಗಳಲ್ಲಿ ಔತಣಕ್ಕಾಗಿ ಬಳಸುವ ಪ್ಲಾಸ್ಟಿಕ್ ತ್ಯಾಜ್ಯ ಸಹ ಇಲ್ಲಿ ಎಸೆಯಲಾಗಿದೆ. ಅಲ್ಲದೆ ಕೆರೆಯಂಚಿನಲ್ಲಿ ಹತ್ತಾರು ಮಾಂಸದ ಅಂಗಡಿಗಳು ತಲೆ ಎತ್ತಿದ್ದು, ತ್ಯಾಜ್ಯ ಎಸೆಯಲು ಬಳಸುತ್ತಿರುವ ಕಸದ ತೊಟ್ಟಿಯಾಗಿ ಕೆರೆಯಂಗಳ ಬಳಕೆಯಾಗುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರ ಕೆರೆಗಳ ಹೂಳು ತೆಗೆಯುವ ಕೆಲಸಕ್ಕೆ ಮುಂದಾಗಿದೆ. ಆದರೆ ಇಲ್ಲಿನ ಕೆರೆಯಲ್ಲಿ ಟ್ರ್ಯಾಕ್ಟರ್‌ಗಟ್ಟಲೆ ಬಳಸಿದ ಮಣ್ಣು, ಇಟ್ಟಿಗೆ ಸುರಿದು ಕೆರೆ ಮುಚ್ಚುವ ಪ್ರಕ್ರಿಯೆ ನಡೆದಿದೆ. ಆಗಾಗ ಇಂಥ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಆದರೂ ಗ್ರಾಮಸ್ಥರಾಗಲಿ ಅಥವಾ ಪಂಚಾಯತಿ ಅಧಿಕಾರಿಗಳಾಗಲಿ ತಡೆಯುವ ಕ್ರಮ ಕೈಗೊಂಡಿಲ್ಲ.
ಹಿಂದೆ ಸಾಮಾಜಿಕ ನಿಯಂತ್ರಣ ಇತ್ತು. ಸಾರ್ವಜನಿಕ ಆಸ್ತಿಗಳೆನಿಸಿದ ರಸ್ತೆ, ಕೆರೆ, ಉದ್ಯಾನದ ರಕ್ಷಣೆ ಬಗ್ಗೆ ಹಿರಿಯರು, ಮುಖಂಡರು ಕಾಳಜಿ ವಹಿಸಿದ್ದರು. ಮೂರ್ನಾಲ್ಕು ವರ್ಷಕ್ಕೆ ಒಂದು ಬಾರಿ ಗ್ರಾಮಸ್ಥರೇ ಕೆರೆ ಹೂಳು ತೆಗೆದು ನೀರಿನ ಸಂರಕ್ಷಣೆಗೆ ಕ್ರಮ ಕೈಗೊಳ್ಳುತ್ತಿದ್ದರು.
ಬದಲಾದ ಸನ್ನಿವೇಶದಲ್ಲಿ ಜನರಲ್ಲಿ ಸಾಮಾಜಿಕ ಬದ್ಧತೆ ಕ್ಷೀಣಿಸಿದೆ. ಎಲ್ಲದಕ್ಕೂ ಸರ್ಕಾರವನ್ನು ದೂಷಿಸುವ ಮನೋ-ಭಾವ ಮೂಡಿದೆ. ಇದರಿಂದ ಸಾರ್ವಜನಿಕ ಆಸ್ತಿಗೆ ರಕ್ಷಣೆ ಇಲ್ಲದಾಗಿದೆ. ಸುಮಾರು 9 ವರ್ಷಗಳಿಂದ ಮಳೆ ಇಲ್ಲದ ಕಾರಣ ಕೆರೆ ಬರಿದಾಗಿದೆ. ಪರಿಣಾಮ ಕೆರೆಯಂಗಳದಲ್ಲಿ ಮುಳ್ಳು ಗಿಡ, ಮರಗಳು ಬೆಳೆದು ನಿಂತಿವೆ.
‘40 ಎಕರೆಗಿಂತ ವಿಸ್ತೀರ್ಣವಾಗಿರುವ ಕೆರೆಯಂಗಳ ಒತ್ತುವರಿಯಾಗಿದೆ. ಇದರಿಂದ ಕೆರೆ ವಿಸ್ತೀರ್ಣ ಗಣನೀಯವಾಗಿ ಕುಗ್ಗಿದೆ. ಕೆರೆಕೋಡಿ ಕೂಡ ಒತ್ತುವರಿಯಾಗಿದೆ. ಈ ವಿಷಯದ ಬಗ್ಗೆ ಈ ಹಿಂದಿನ ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿತ್ತಾದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಹುಣಸನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ ಅವರ ಆರೋಪ.
ಪಟ್ಟಣದ ಹೊರವಲಯದ ದೇಶಹಳ್ಳಿ ಕೆರೆ, ಕೀಲುಕುಪ್ಪಕೆರೆ ಕೂಡ ಇದಕ್ಕೆ ಬಿನ್ನವಾಗಿಲ್ಲ. ಪಟ್ಟಣದ ಅಕ್ಕಿಗಿರಣಿಗಳ ತ್ಯಾಜ್ಯವನ್ನು ಅಲ್ಲಿ ಸುರಿಯಲಾಗಿದೆ. ಬಟ್ಟಲಿನಂತಿದ್ದ ಕೆರೆಗಳು ತಟ್ಟೆ ಆಕಾರ ತಾಳುತ್ತಿವೆ. ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜ ಕಾಲುವೆಗಳು ಕೆಲವೆಡೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಕೆಲವೆಡೆ ಒತ್ತುವರಿ ನಡೆಯುತ್ತಿದೆ.
ಗ್ರಾಮಸ್ಥರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೆರೆಯಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟುವಂತೆ ಸಂಬಂಧಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಹಶೀಲ್ದಾರ್ ಎಸ್.ಆರ್.ಉಷಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.