ADVERTISEMENT

10 ರಾಜ್ಯ ಹೆದ್ದಾರಿಗಳಲ್ಲಿ ಟೋಲ್: ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 4:44 IST
Last Updated 1 ಡಿಸೆಂಬರ್ 2012, 4:44 IST

ಬೆಂಗಳೂರು: ರಾಜ್ಯ ಹೆದ್ದಾರಿ ಯೋಜನೆ- ಒಂದು (ಕೆಶಿಪ್-1) ಅಡಿಯಲ್ಲಿ ನಿರ್ಮಿಸಿರುವ ಸಾವಿರ ಕಿ.ಮೀ. ಉದ್ದದ 10 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ (ಶುಲ್ಕ) ಸಂಗ್ರಹ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ, ಕಾರ್ಯಾಚರಣೆ ಹಾಗೂ ಸಂಗ್ರಹಿಸಿದ ಸುಂಕದ ವರ್ಗಾವಣೆ (ಒಎಂಟಿ) ಆಧಾರದ ಮೇಲೆ 10 ವರ್ಷಗಳ ಅವಧಿಗೆ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ.

ಸಭೆಯ ಬಳಿಕ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗಾರರಿಗೆ ಮಾಹಿತಿ ನೀಡಿ, `ಈ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ರಾಜ್ಯ ಸರ್ಕಾರ 1,750 ಕೋಟಿ ರೂಪಾಯಿ ವೆಚ್ಚ ಮಾಡುತ್ತಿತ್ತು. ಶುಲ್ಕ ಸಂಗ್ರಹ ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 200 ಕೋಟಿ ರೂಪಾಯಿ ಲಾಭ ಬರಲಿದೆ. ಅಲ್ಲದೆ ರಸ್ತೆಗಳ ಸಮರ್ಪಕ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ' ಎಂದು ತಿಳಿಸಿದರು.

`ತಕ್ಷಣದಿಂದ ಶುಲ್ಕ ಸಂಗ್ರಹ ಮಾಡುವುದಿಲ್ಲ. ರಸ್ತೆಗಳ ದುರಸ್ತಿ, ಅಭಿವೃದ್ಧಿ ಸೇರಿದಂತೆ ವಿವಿಧ ಪ್ರಕ್ರಿಯೆಗೆ ಏಳೆಂಟು ತಿಂಗಳು ಬೇಕಾಗುತ್ತದೆ. ಆ ಬಳಿಕವೇ ಶುಲ್ಕ ಸಂಗ್ರಹ ಮಾಡಲಾಗುವುದು' ಎಂದರು.

ಕಲ್ಮಲ- ಶಿಗ್ಗಾಂವ್, ಶ್ರೀರಂಗಪಟ್ಟಣ- ಜೇವರ್ಗಿ ನಡುವಣ, ಸಂಕೇಶ್ವರ-ಸಂಗಮ್, ಔರಾದ್-ಸದಾಶಿವಗಡ, ರಾಯಚೂರು-ಬಾಚಿ, ಬಾಗಲಕೋಟೆ-ಬಿಳಿಗಿರಿರಂಗನ ಬೆಟ್ಟ, ಮೈಸೂರು-  ಬಂಟ್ವಾಳ, ಬಸವಕಲ್ಯಾಣ- ರಾಯಚೂರು, ಸಿಂಧಗಿ-ಕೊಂಡಗಲ್ ರಾಜ್ಯ ಹೆದ್ದಾರಿಯಲ್ಲಿ ಶುಲ್ಕ ಸಂಗ್ರಹ ಮಾಡಲಾಗುವುದು.
ತುಮಕೂರಿನಲ್ಲಿ ರಾಷ್ಟ್ರೀಯ ಬಂಡವಾಳ ಹಾಗೂ ಉತ್ಪನ್ನ ವಲಯ (ಎನ್‌ಐಎಂಜೆಡ್) ಅಭಿವೃದ್ಧಿಪಡಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

`ಈ ವಲಯ ಸ್ಥಾಪನೆಗೆ ರಾಜ್ಯವನ್ನು ಏಳನೇ ರಾಜ್ಯವನ್ನಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಈ ವಲಯಕ್ಕೆ 41 ಸಾವಿರ ಕೋಟಿ ರೂಪಾಯಿ ಕೇಂದ್ರ ಸರ್ಕಾರ ಹೂಡಿಕೆ ಮಾಡಲಿದೆ. ಸಂಪರ್ಕ ರಸ್ತೆ, ಜಮೀನು ಒದಗಿಸುವುದು ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ.

ಜಿಲ್ಲೆಯ ಯಾವ ಪ್ರದೇಶದಲ್ಲಿ ಹಾಗೂ ಎಷ್ಟು ಎಕರೆ ವಿಸ್ತೀರ್ಣದಲ್ಲಿ ವಲಯ ಸ್ಥಾಪನೆ ಮಾಡಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಲಿದೆ' ಎಂದು ಕಾಗೇರಿ ಮಾಹಿತಿ ನೀಡಿದರು.

ಭೂಸ್ವಾಧೀನ ಕಾಯ್ದೆ 1894ರ ಕಲಂ 48 (1) ರಡಿ ಅಧಿಕಾರ ಚಲಾಯಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳು, ಮಾನದಂಡಗಳನ್ನು ನಿರ್ಧರಿಸುವ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.