ADVERTISEMENT

ಯಲ್ದೂರು: 13ನೇ ಶತಮಾನದ ದೇಗುಲ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:25 IST
Last Updated 10 ಸೆಪ್ಟೆಂಬರ್ 2025, 4:25 IST
ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿ ಮಂಜಲನಗರದ ಬಳಿ ಪತ್ತೆಯಾದ ದೇಗುಲ
ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿ ಮಂಜಲನಗರದ ಬಳಿ ಪತ್ತೆಯಾದ ದೇಗುಲ    

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಹೋಬಳಿ ಮಂಜಲನಗರದಿಂದ ಕಮ್ಮಸಂದ್ರ ಗ್ರಾಮಕ್ಕೆ ತೆರಳುವ ದಾರಿಯಲ್ಲಿನ ಮಾವಿನ ತೋಪಿನಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಾಣವಾದದ್ದು ಎನ್ನಲಾದ ದೇವಾಲಯ ಪತ್ತೆಯಾಗಿದೆ.

ಮಂಜಲನಗರದ ಗ್ರಾಮದ ಜಯಕುಮಾರ್ ಮನವಿ ಮೇರೆಗೆ ಇತಿಹಾಸಕಾರರು ಹಾಗೂ ಶಾಸನ ತಜ್ಞ ಪ್ರೊ.ಕೆ.ಆರ್.ನರಸಿಂಹನ್, ವೀರಗಲ್ಲುಗಳ ಅಧ್ಯಯನಕಾರ ಕೆ.ಧನಪಾಲ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದ ಪುರಾತನ ದೇವಾಲಯ ಅಧ್ಯಯನ ನಡೆಸಿದಾಗ ಅಲ್ಲಿದ್ದ ಶಾಸನಗಳು, ಪುರಾವೆಗಳ ಆಧಾರದಲ್ಲಿ ದೇವಾಲಯ 13ನೇ ಶತಮಾನದ ಹೊಯ್ಸಳರ ಅರಸ ರಾಮನಾಥನ ಕಾಲಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ.

ಅರಸ ರಾಮನಾಥನ ಬಲವೃದ್ಧಿಗೆ ಆತನ ಮಂತ್ರಿ, ಪ್ರಮುಖ ಅಧಿಕಾರಿಗಳು ವೆಟ್ಟಪಲ್ಲಿಗೆ ಸೇರಿದ ಜಮೀನುಗಳನ್ನು ಧರ್ಮವಾಗಿ ಬಿಟ್ಟಿದ್ದಾರೆ ಎಂದು ಶಾಸನ ತಜ್ಞರು ಹೇಳಿದ್ದಾರೆ.

ADVERTISEMENT

ಹೊಯ್ಸಳರ ಕಾಲದ ದೇವಾಲಯವಾದರೂ ಇದನ್ನು ಚೋಳರ ಶೈಲಿಯಲ್ಲಿ ನಿರ್ಮಿಸಿರುವುದು ವಿಶೇಷ ಎನ್ನಲಾಗಿದೆ. 45 ವರ್ಷಗಳ ಹಿಂದೆ ಪೂಜಾದಿ ಕಾರ್ಯಗಳು ನಡೆಯುತ್ತಿದ್ದು, ದೇವಾಲಯ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಗರ್ಭಗುಡಿಯಲ್ಲಿದ್ದ ಲಕ್ಷ್ಮಿ–ನಾರಾಯಣನ ವಿಗ್ರಹಗಳನ್ನು ಗ್ರಾಮದ ಕಟ್ಟಡವೊಂದರಲ್ಲಿ ಸಂರಕ್ಷಿಸಲಾಗಿದೆ. ಇದನ್ನು ಮುಜರಾಯಿ ಇಲಾಖೆ ದಾಖಲೆಗಳಲ್ಲಿ ಲಕ್ಷ್ಮಿ-ನಾರಾಯಣ ದೇವಸ್ಥಾನ ಎಂದು ನಮೂದಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಇತಿಹಾಸಕಾರರು, ಇದು ಲಕ್ಷ್ಮಿ-ನಾರಾಯಣನ ವಿಗ್ರಹಗಳಲ್ಲ; ಇವು ಚನ್ನಕೇಶವ-ಶ್ರೀದೇವಿ ಭೂದೇವಿ ಅಮ್ಮನವರ ವಿಗ್ರಹಗಳು ಎನ್ನುತ್ತಾರೆ.

ಯದರೂರು ಮಂಜುನಾಥ ದೀಕ್ಷಿತ್, ಕೃಷ್ಣಗಿರಿ ಸಂಶೋಧಕ ಗೋವಿಂದರಾಜ್ ನೆರವಾಗಿದ್ದು, ದೇವಾಲಯವನ್ನು ಸಂರಕ್ಷಿಸಿಕೊಡಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.