ADVERTISEMENT

2 ಗಂಟೆ ರಸ್ತೆ ತಡೆ, ಸಂಚಾರ ಬಂದ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 4:50 IST
Last Updated 17 ಅಕ್ಟೋಬರ್ 2012, 4:50 IST

ಕೋಲಾರ: ಇಟ್ಟಿಗೆ ಕಾರ್ಖಾನೆ ಕಾರ್ಮಿಕರೊಬ್ಬರ ಮೇಲೆ ಅಮಾನುಷ ಹಲ್ಲೆ ನಡೆಸಿರುವ ಡಿವೈಎಸ್‌ಪಿ ಶ್ರೀಹರಿ ಬರಗೂರು ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮತ್ತು ಇಟ್ಟಿಗೆ ಕಾರ್ಖಾನೆ ಮಾಲೀಕರ ಸಂಘದವರು ನಗರದ ಮೆಕ್ಕೆವೃತ್ತದಲ್ಲಿ ಮಂಗಳವಾರ ಎರಡೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ-ಧರಣಿ ನಡೆಸಿದರು. ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಧಿಕ್ಕಾರ ಕೂಗಿದರು. ಶ್ರೀಹರಿ ಬರಗೂರು ಅವರ ಪ್ರತಿಕೃತಿಗೆ ಬೆಂಕಿ ಇಟ್ಟರು.

ಮರಳು ಗಣಿಗಾರಿಕೆಯನ್ನು ತಡೆಯುವ ಬದಲು ಪೊಲೀಸರು ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಪೊಲೀಸರನ್ನು ಮುಂದಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಜನವಿರೋಧಿ ರಾಜಕಾರಣ ಮಾಡುತ್ತಿದ್ದಾರೆ. ಮರಳು ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಮರಳು ಸಾಗಿಸುತ್ತಿದ್ದಾರೆಂದು ಆರೋಪಿಸಿ ಇಟ್ಟಿಗೆ ಕಾರ್ಮಿಕರನ್ನು ವಶಕ್ಕೆ ಪಡೆದು ಅಮಾನುಷವಾಗಿ ಹಿಂಸಿಸಿರುವ ಪೊಲೀಸರ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ.

ಮರಳು ಸಾಗಣೆ ಮಾಡುವವರನ್ನು ಹಿಡಿಯುವ ಬದಲು ಇಟ್ಟಿಗೆಗೆ ಮಣ್ಣನ್ನು ಸಾಗಿಸುವ ಮಂದಿಯನ್ನು ಹಿಡಿದು ಹಿಂಸಿಸುವ ಮೂಲಕ ಪೊಲೀಸರು ತಮ್ಮ ಅಸಮರ್ಥತೆಯನ್ನು ತೋರಿಸಿದ್ದಾರೆ ಎಂದು ಹತ್ತಾರು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ನಿಸಾರ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಮುಖಂಡರಾದ ಅನ್ವರ್, ಶ್ರೀಕೃಷ್ಣ, ಎಪಿಎಂಸಿ ನಿರ್ದೇಶಕಿ ರಾಜೇಶ್ವರಿ, ನಗರಸಭೆ ಸದಸ್ಯ ಸಲಾವುದ್ದೀನ್ ಬಾಬು, ಮಾಜಿ ಸದಸ್ಯ ಅಪ್ರೋಸ್ ಪಾಷಾ, ಸಿ.ಎಂ.ಮುನಿಯಪ್ಪ ಮಾತನಾಡಿ, ಅಲ್ಪಸಂಖ್ಯಾತರ ಮೇಲೆ ಪೊಲೀಸರ ದೌರ್ಜನ್ಯ ನಿಲ್ಲಬೇಕು. ಅನುಭವವಿಲ್ಲದ ಅಧಿಕಾರಿಗಳನ್ನು ಜಿಲ್ಲೆಗೆ ನಿಯೋಜಿಸುವ ಪರಿಪಾಠ ನಿಲ್ಲಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ ಜಾತ್ಯತೀತ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕಾದ ಡಿವೈಎಸ್ಪಿ ಶ್ರೀಹರಿ ಬರಗೂರು ಒಂದೇ ಮುಸ್ಲಿಂ ಸಮುದಾಯದ ಕಾರ್ಮಿಕರನ್ನು ಅಮಾನುಷವಾಗಿ ಹಿಂಸಿಸುತ್ತಾರೆ, ಮತ್ತೊಂದೆಡೆ ಜಾತಿ ಆಧಾರಿತ ಸಂಘಟನೆಗಳ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಪಾಲ್ಗೊಳ್ಳುತ್ತಾರೆ.  ಇವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು.

ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಇ.ಗೋಪಾಲಪ್ಪ, ಬಣಕನ ಹಳ್ಳಿ ನಟರಾಜ್, ಅಬ್ದುಲ್ ಖಯ್ಯೂಂ, ಚೆನ್ನವೀರಯ್ಯ, ನಗರಸಭೆ ಸದಸ್ಯರಾದ ತ್ಯಾಗರಾಜ್, ರವೀಂದ್ರ, ಲಾಲ್‌ಬಹದೂರ್ ಶಾಸ್ತ್ರಿ, ಅಪ್ಸರ್, ತ್ಯಾಗರಾಜ್ ಮುದ್ದಪ್ಪ, ಸ್ಟ್ರಗಲ್ ಮಂಜು, ಇಟ್ಟಿಗೆ ಕಾರ್ಖಾನೆಗಳ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್ ಬಂದೋಬಸ್ತ್ ನೇತೃತ್ವ ವಹಿಸಿದ್ದರು.

ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐಗಳು, ಕಾನ್ಸ್‌ಟೇಬಲ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಸೂಕ್ತ ಕ್ರಮ: ಧರಣಿ ನಿರತ ಒತ್ತಾಯಕ್ಕೆ ಮಣಿದು 2.30ರ ವೇಳೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್ ಅವರ  ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಮನವಿ ಪತ್ರದಲ್ಲಿರುವುದರ ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಒಂದೇ ಮಾತಿನಲ್ಲಿ ಭರವಸೆ ನೀಡಿ ಸ್ಥಳದಿಂದ ನಿರ್ಗಮಿಸಿದರು.

ಪರದಾಟ: ವೃತ್ತದ ನಾಲ್ಕೂ ದಿಕ್ಕಿನಲ್ಲಿ ಯಾವುದೇ ವಾಹನ ಸಂಚಾರವಾಗದಂತೆ ಲಾರಿ, ಟ್ರ್ಯಾಕ್ಟರ್, ಜೆಸಿಬಿ ವಾಹನ ಮತ್ತು ಬೈಕ್‌ಗಳನ್ನು ಅಡ್ಡ ನಿಲ್ಲಿಸಿದ ಧರಣಿ ನಿರತರು ವಾಹನಗಳ ಮುಂದೆಯೇ ಕುಳಿತು ಧರಣಿಯಲ್ಲಿ ಪಾಲ್ಗೊಂಡರು.

ಪರಿಣಾಮವಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಾರ್ವಜನಿಕರು ಪರದಾಡಿದರು.
ದ್ವಿಚಕ್ರ ವಾಹನ ಸವಾರರು, ಆಟೋ ರಿಕ್ಷಾಗಳು ಸೇರಿದಂತೆ ನೂರಾರು ವಾಹನಗಳು ಸುತ್ತಮುತ್ತಲಿನ ಕೆಲವು ಅಡ್ಡ ರಸ್ತೆಗಳನ್ನು ಬಳಸಿದ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿತ್ತು.

ಪ್ರತಿಭಟನೆ ಕೊನೆಗೊಂಡ ಬಳಿಕ ನಾಲ್ಕೂದಿಕ್ಕಿನಿಂದ ಏಕಾಏಕಿ ವಾಹನ ಸಂಚಾರ ಶುರುವಾದ ಪರಿಣಾಮ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.