ADVERTISEMENT

ಅರ್ಜಿ ವಿಲೇವಾರಿಗೆ 2 ತಿಂಗಳ ಗಡುವು: ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್

ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 13:49 IST
Last Updated 18 ಆಗಸ್ಟ್ 2021, 13:49 IST
ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್ ಕೋಲಾರದಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್ ಕೋಲಾರದಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಕೋಲಾರ: ‘ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಹಂತಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು 2 ತಿಂಗಳೊಳಗೆ ವಿಲೇವಾರಿ ಮಾಡಬೇಕು’ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಬುಧವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಭೂಮಿ ತಂತ್ರಾಂಶದಲ್ಲಿ ವಿವಿಧ ಅಧಿಕಾರಿಗಳ ಬಳಿ ಹಾಗೂ ಕಾವೇರಿ ತಂತ್ರಾಂಶದಲ್ಲಿ ತಹಶೀಲ್ದಾರ್ ಹಂತದಲ್ಲಿ ಪ್ರಕರಣಗಳು ಬಾಕಿಯಿವೆ. ಬಂಗಾರಪೇಟೆ ತಾಲ್ಲೂಕಿನಲ್ಲಿ 80 ಪ್ರಕರಣ ಬಾಕಿಯಿದ್ದು, ಒಂದು ವಾರದೊಳಗೆ ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.

‘ತಹಶೀಲ್ದಾರ್‌ಗಳು ಅರೆ ನ್ಯಾಯಿಕ ಪ್ರಕರಣಗಳಲ್ಲಿ ಮೊದಲು 2 ವರ್ಷದಿಂದ 5 ವರ್ಷಗಳೊಳಗೆ ಬಾಕಿಯಿರುವ ಪ್ರಕರಣಗಳನ್ನು ತೆಗೆದುಕೊಂಡು 2 ತಿಂಗಳೊಳಗೆ ಇತ್ಯರ್ಥಪಡಿಸಬೇಕು. ಪಹಣಿ ಕಾಲಂ 3 ಮತ್ತು 9ಕ್ಕೆ ವ್ಯತ್ಯಾಸವಿರುವ ಪ್ರಕರಣಗಳ ತಿದ್ದುಪಡಿ, ಭೂ ಮಂಜೂರಾತಿ ನಮೂನೆ, 53ರ ಪ್ರಕರಣಗಳ ವಿಲೇವಾರಿ, 94ಸಿ, 94ಸಿಸಿ ಹಾಗೂ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಬಗ್ಗೆ ಗಮನಹರಿಸಬೇಕು’ ಎಂದರು ಹೇಳಿದರು.

ADVERTISEMENT

‘ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಎದುರಾಗಿರುವ ತೊಡಕುಗಳನ್ನು ಕಾನೂನಾತ್ಮಕವಾಗಿ ಶೀಘ್ರವೇ ಪರಿಹರಿಸಿಕೊಳ್ಳಿ. ರೈತರಿಗೆ ಮನವರಿಕೆ ಮಾಡಿಕೊಟ್ಟು ಭೂಸ್ವಾಧೀನ ಪ್ರಕ್ರಿಯೆ ಸೆ.30ರೊಳಗೆ ಪೂರ್ಣಗೊಳಿಸಬೇಕು’ ಎಂದು ಆದೇಶಿಸಿದರು.

‘ಸಾರ್ವಜನಿಕರು ಸರ್ವೆ ಮಾಡಲು ಅರ್ಜಿ ಸಲ್ಲಿಸಿದ್ದು, ಹೆಚ್ಚಿನ ಪ್ರಕರಣಗಳು ತಹಶೀಲ್ದಾರ್ ಹಂತದಲ್ಲಿ ಬಾಕಿ ಉಳಿದಿವೆ. ಆರ್‌ಟಿಸಿ ಹೊಂದಾಣಿಕೆ ಆಗದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಅರ್ಜಿಗಳು ಬಾಕಿಯಿದ್ದು, ತಹಶೀಲ್ದಾರ್‌ಗಳು ಗುರಿ ನಿಗದಿಪಡಿಸಿಕೊಂಡು ಪ್ರತಿ ವಾರ ಇತ್ಯರ್ಥಪಡಿಸಬೇಕು. ಪ್ರತಿ ಸರ್ವೆಯರ್‌ ತಿಂಗಳಿಗೆ ಕನಿಷ್ಠ 23 ಸರ್ವೆ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು’ ಎಂದು ಸರ್ವೆ ಇಲಾಖೆ ಆಯುಕ್ತ ಮನೀಷ್‌ ಮೌದ್ಗಿಲ್‌ ಸೂಚಿಸಿದರು.

ಅದಾಲತ್‌: ‘ಗ್ರಾಮವಾರು ಪಿ ನಂಬರ್‌ಗಳನ್ನು ಪಟ್ಟಿ ಮಾಡಬೇಕು. ತಹಶೀಲ್ದಾರ್‌ಗಳು ಬಾಕಿ ಇರುವ ಪಿ ನಂಬರ್‌ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಬೇಕು. 2 ವರ್ಷಕ್ಕಿಂದ ಹೆಚ್ಚು ಅವಧಿಯಿಂದ ಬಾಕಿ ಇರುವ ಅರೆ ನ್ಯಾಯಿಕ ಪ್ರಕರಣಗಳನ್ನು ದಿನಾಂಕಗಳನ್ನು ನಿಗದಿಪಡಿಸಿ ಒಂದು ವಾರದಲ್ಲಿ ಇತ್ಯರ್ಥಪಡಿಸಿ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

‘ಅರೆ ನ್ಯಾಯಿಕ ಪ್ರಕರಣಗಳೆಲ್ಲಾ ರಿಜಿಸ್ಟರ್ ಡಾಕ್ಯೂಮೆಂಟ್‌ ಮೇಲೆ ಇವೆ. ತಾಲ್ಲೂಕುವಾರು ಅದಾಲತ್‌ನಡೆಸಿ ಈ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಜನರನ್ನು ಕಚೇರಿಗೆ ಅಲೆಸಬಾರದು’ ಎಂದು ಎಚ್ಚರಿಕೆ ನೀಡಿದರು.

ಪ್ರಾದೇಶಿಕ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತ ಇಸಾವುದ್ದೀನ್ ಜೆ.ಗದ್ಯಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಉಪ ವಿಭಾಗಾಧಿಕಾರಿ ಆನಂದ್‌ಪ್ರಕಾಶ್ ಮೀನಾ, ಯೋಜನಾ ನಿರ್ದೇಶಕ ಸೋಮಶೇಖರ್‌, ತಹಶೀಲ್ದಾರ್‌ಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.