ADVERTISEMENT

ವೈಶಿಷ್ಟ್ಯಗಳ ತಾಣ ಈ ರೈಲು ನಿಲ್ದಾಣ

ಬಂಗಾರಪೇಟೆ: ನಿತ್ಯ 20 ಸಾವಿರ ಪ್ರಯಾಣಿಕರ ಸಂಚಾರ

ಕಾಂತರಾಜು ಸಿ. ಕನಕಪುರ
Published 23 ಅಕ್ಟೋಬರ್ 2022, 5:34 IST
Last Updated 23 ಅಕ್ಟೋಬರ್ 2022, 5:34 IST
ಬಂಗಾರಪೇಟೆ ರೈಲ್ವೆ ನಿಲ್ದಾಣದ ಹೊರನೋಟ
ಬಂಗಾರಪೇಟೆ ರೈಲ್ವೆ ನಿಲ್ದಾಣದ ಹೊರನೋಟ   

ಬಂಗಾರಪೇಟೆ: ಐತಿಹಾಸಿಕ ಮಹತ್ವ ಹೊಂದಿರುವ ಪಟ್ಟಣದ ರೈಲು ನಿಲ್ದಾಣ ಹಲವು ವೈಶಿಷ್ಟ್ಯಗಳ ತಾಣ. ವಿಸ್ತಾರದಲ್ಲಿ ಬೆಂಗಳೂರು ವಿಭಾಗದಲ್ಲಿಯೇ ಎರಡನೇ ದೊಡ್ಡ ರೈಲ್ವೆ ಜಂಕ್ಷನ್.

ಬಸ್ ನಿಲ್ದಾಣಕ್ಕೆ ಅತಿ ಸಮೀಪವಿರುವ ದೇಶದ ರೈಲ್ವೆ ನಿಲ್ದಾಣಗಳಲ್ಲಿ ಇದು ಕೂಡ ಒಂದು. ನಾಲ್ಕೂ ದಿಕ್ಕುಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಇಲ್ಲಿಯ ಏಕೈಕ ನಿಲ್ದಾಣ ಕೂಡ ಹೌದು.

ಕಾಶಿ, ಶಿರಡಿ, ಶಬರಿಮಲೆ ಸೇರಿದಂತೆ ರಾಷ್ಟ್ರದ ಬಹುತೇಕ ಯಾತ್ರಾಸ್ಥಳಗಳಿಗೆ ಇಲ್ಲಿಂದ ತೆರಳುವ ಅನುಕೂಲವಿದೆ. 6 ಫ್ಲಾಟ್‌ಫಾರಂ , 10 ರೈಲ್ವೆ ಹಳಿ ಹೊಂದಿದೆ. ನಿತ್ಯ 100ಕ್ಕೂ ಹೆಚ್ಚು ಪ್ರಯಾಣಿಕರ ರೈಲು ಹಾಗೂ ಗೂಡ್ಸ್ ರೈಲುಗಳು ಸಂಚರಿಸುತ್ತವೆ.

ADVERTISEMENT

ಇಲ್ಲಿನ ರೈಲು ನಿಲ್ದಾಣದ ಮೂಲಕ ನಿತ್ಯ 20 ಸಾವಿರಕ್ಕೂ ಹೆಚ್ಚು ನಿತ್ಯ ಪ್ರಯಾಣಿಕರು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುತ್ತಾರೆ. ಜಿಲ್ಲೆಯಲ್ಲಿ ಹೆಚ್ಚು ಸೀಸನ್ ಪಾಸ್ ವಿತರಿಸುವ ನಿಲ್ದಾಣ ಕೂಡ ಇದಾಗಿದೆ.

ಇಲ್ಲಿಂದ ಬಸು ಮೂಲಕ ಬೆಂಗಳೂರಿಗೆ ಸಂಚರಿಸಬೇಕಾದರೆ ಕನಿಷ್ಠ 2.30 ರಿಂದ 3 ಗಂಟೆ ಬೇಕು. ರೈಲು ಮೂಲಕ ಕೇವಲ 1.15 ಗಂಟೆಯಲ್ಲಿ ತಲುಪಬಹುದು. ರೈಲು ಅನುಕೂಲ ಇರುವುದರಿಂದ ಪಟ್ಟಣಕ್ಕೆ ಬಂದು ನೆಲೆಸುವವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚುತ್ತಿದೆ.

ಇಲ್ಲಿನ ವಾಣಿಜ್ಯ ಬೆಳೆ ಫಸಲು ಹಾಗೂ ತಾಲ್ಲೂಕಿನ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬೆಳೆಯುವ ಮಾವಿನ ಫಸಲನ್ನು ಪಟ್ಟಣದ ಮೂಲಕ ಇತರ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಬೆಂಗಳೂರು ಬಿಟ್ಟರೆ ರೈಲ್ವೆ ರಕ್ಷಣ ದಳ, ರೈಲ್ವೆ ಪೊಲೀಸ್ ಠಾಣೆಗಳು ಇಲ್ಲಿವೆ. ಪ್ಯಾಸೆಂಜರ್ ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆ ಇರುವುದು ಕೂಡ ಇಲ್ಲೇ ಎನ್ನುವುದು ಹೆಗ್ಗಳಿಕೆ. ಜತೆಗೆ ಟವರ್ ಕಾರ್ ಮತ್ತು ಒಎಚ್ಪಿ ಕಾರ್ ಸೈಡಿಂಗ್ಗಳಿವೆ. ಬಂಗಾರಪೇಟೆ-ಕುಪ್ಪಂ ಹಾಗೂ ಕೋಲಾರ-ಮರಲಹಳ್ಳಿ-ಮಾಲೂರು ಶಾಶ್ವತ ಮಾರ್ಗ ತಪಾಸಣೆ ವಾಹನಗಳಿವೆ.
ಅಲ್ಲದೆ ಇದರ ಕೋಲಾರ ಹಾಗೂ ಬಂಗಾರಪೇಟೆ ಶಾಖೆಗಳ ಕೇಂದ್ರ ಕಚೇರಿ ಇಲ್ಲೇ ಇರುವುದು ವಿಶೇಷ.

ಪಟ್ಟಣದಲ್ಲಿ 20ಕ್ಕೂ ಹೆಚ್ಚು ಅಕ್ಕಿಗಿರಣಗಳಿವೆ. ಅವೆಲ್ಲವಕ್ಕೂ ರೈಲು ಮೂಲಕವೇ ಅಕ್ಕಿ ಸರಬರಾಜು ಆಗುತ್ತಿದೆ. ಗೋದಾಮುಗಳಿಗೆ ಈ ನಿಲ್ದಾಣದ ಮೂಲಕವೇ ಆಹಾರ ಧಾನ್ಯಗಳು ಸಗಾಣಿಕೆ ಆಗುತ್ತದೆ.

ಗಾಂಧಿ ನೆನಪು

ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಐತಿಹಾಸಿಕ ಮಹತ್ವವಿದೆ. ಹರಿಜನರ ಸಂಘಟನೆ ಹಾಗೂ ಕಲ್ಯಾಣಾಭಿವೃದ್ಧಿಗಾಗಿ ಮಹಾತ್ಮಾಗಾಂಧೀಜಿ ಅವರು 20ನೇ ಶತಮಾನದ ಆರಂಭದಲ್ಲಿ ದೇಶದ ಉದ್ದಗಲಕ್ಕೂ ಸಂಚರಿಸಿದರು. ಆಗ ಇಲ್ಲಿಗೂ ಭೇಟಿ ನೀಡಿದ್ದರು. 1918ರಲ್ಲಿ ರೈಲು ಮೂಲಕ ಬಂಗಾರಪೇಟೆ, ಕೆಜಿಎಫ್‌ಗೆ ಕೂಡ ಸಂಚರಿಸಿದ್ದರು. ಅಲ್ಲಿ ಹರಿಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಅಲ್ಲದೆ ಸಮೀಪದ ಊರಿಗಾಂ ಮತ್ತು ಚಾಂಪಿಯನ್ ರೈಲ್ವೆ ನಿಲ್ದಾಣಗಳನ್ನು ಐತಿಹಾಸಿಕ ರೈಲ್ವೆ ನಿಲ್ದಾಣಗಳನ್ನಾಗಿ ಪರಿವರ್ತನೆ ಮಾಡಲಾಗುತ್ತದೆ.

ವಂದೇ ಭಾರತ್‌ ರೈಲು ಸಂಚಾರ

ಪಟ್ಟಣ ಕೋಲಾರಕ್ಕೆ ಆರಂಭದಲ್ಲಿ ನ್ಯಾರೋ ಗೇಜ್ ಹಳಿಯಿತ್ತು. ಬಳಿಕ ಬ್ರಾಡ್‌ಗೇಜ್‌ ಆಗಿ ಪರಿವರ್ತಿಸಲಾಯಿತು. ಬ್ರಾಡ್ಗೇಜ್ ಆಗಿ ಬದಲಾದ ಮೇಲೆ ರೈಲ್ಬಸ್ ಸಂಚರಿಸುತ್ತಿದ್ದು, ಈಗ ಡೆಮೊ ರೈಲು ಸಂಚರಿಸುತ್ತಿದೆ. ಪ್ರಸ್ತುತ ವಿದ್ಯುತ್ತೀಕರಣ ನಡೆಯುತ್ತಿದ್ದು, ಶೀಘ್ರದಲ್ಲೇ ಮೆಮೊ ರೈಲು ಸಂಚರಿಸಲಿದೆ. ‌

ಮೈಸೂರು–ಚೆನ್ನೈ ಮಾರ್ಗದ ವಂದೇ ಭಾರತ್‌ ರೈಲು ಸಂಚಾರ ನ.10ರಿಂದ ಆರಂಭವಾಗಲಿದ್ದು, ಬಂಗಾರಪೇಟೆಯ ಮೂಲಕವೇ ಚೆನ್ನೈ ತಲುಪಲಿದೆ ಎಂದು ಮಾರಿಕುಪ್ಪಂ ನಿಲ್ದಾಣ ವ್ಯವಸ್ಥಾಪಕ ರಮೇಶ್‌ ಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.